ಕೌಲಲಾಂಪುರ: ಮಲೇಶಿಯಾದ ಕೌಲಲಾಂಪುರದಿಂದ ಚೀನಾದ ಬೀಜಿಂಗ್ ನತ್ತ ಸಾಗಿದ್ದ ಮಲೇಶಿಯನ್ ಏರ್ ಲೈನ್ಸ್ ವಿಮಾನ ಶನಿವಾರ ಮುಂಜಾನೆ ಮಲೇಶಿಯಾದ ನಿಯಂತ್ರಣ ಕೊಠಡಿಯಿಂದ ಸಂಪರ್ಕವನ್ನು ಕಡಿದುಕೊಂಡು ಆಕಾಶದಲ್ಲಿ ನಾಪತ್ತೆಯಾಗಿದೆ. ಫ್ಲೈಟ್ ಎಂಎಚ್ 370 ಹೆಸರಿನ ಬೋಯಿಂಗ್ 777 ವಿಮಾನದಲ್ಲಿ 227 ಪ್ರಯಾಣಿಕರು ಹಾಗೂ 12 ಮಂದಿ ವಿಮಾನ ಸಿಬ್ಬಂದಿಯಿದ್ದರು. ಇವರ ಪೈಕಿ 160 ಮಂದಿ ಚೀನಿಯರಾಗಿದ್ದಾರೆ. ಕೌಲಲಾಂಪುರದಿಂದ ರಾತ್ರಿ 12.20ಕ್ಕೆ ಪ್ರಯಾಣ ಆರಂಭಿಸಿದ ವಿಮಾನ ಬೆಳಿಗ್ಗೆ 6.30ರ ಸುಮಾರಿಗೆ ಬೀಜಿಂಗ್ ತಲುಪಬೇಕಿತ್ತು. ಆದರೆ ಹಾರಾಟ ಆರಂಭಿಸಿದ ಎರಡು ಗಂಟೆಗಳಲ್ಲಿ ಅಂದರೆ ರಾತ್ರಿ 2.40ರ ಹೊತ್ತಿಗೆ ವಿಮಾನವು ನಿಯಂತ್ರಣ ಕೊಠಡಿಯಿಂದ ಸಂಪರ್ಕವನ್ನು ಕಳೆದುಕೊಂಡಿತು. ವಿಮಾನವು ಏನಾಗಿದೆ ಎಂಬ ಬಗ್ಗೆ ಇನ್ನೂ ಕೂಡಾ ಮಾಹಿತಿ ದೊರೆತಿಲ್ಲ.
ಚೀನಾ ಮಾಧ್ಯಮಗಳ ಪ್ರಕಾರ ಈ ವಾಯುದ ದಾರಿಯಲ್ಲಿ ವಿಮಾನ ಪತನವಾದ ಮಾಹಿತಿ ದೊರೆತಿಲ್ಲ. ಬೋಯಿಂಗ್ ವಿಮಾನವು ವಿಯೇಟ್ನಾಂ ವಾಯುಪ್ರದೇಶದ ಮೇಲೆ ಹಾರಾಡುತ್ತಿದ್ದ ಸಮಯದಲ್ಲಿ ನಾಪತ್ತೆಯಾಗಿದೆ. ಮಲೇಶಿಯಾ ಮತ್ತು ಚೀನಾ ಜಂಟಿಯಾಗಿ ವಿಮಾನ ಶೋಧಕಾರ್ಯದಲ್ಲಿ ತೊಡಗಿವೆ.
