
ಮುಂಬೈ: ಶನಿವಾರ ಮುಂಬೈ ಹೈಕೋಟರ್್ನ ಆದೇಶವೊಂದರಲ್ಲಿ ಬಿಸಿಯೂಟ ಯೋಜನೆಯ ಜವಾಬ್ದಾರಿಯನ್ನು ಅದ್ಯಾಪಕರ ಹೆಗಲ ಮೇಲೆ ಹಾಕುವುದು ಸರಿಯಲ್ಲ ಎಂದು ಹೇಳುವ ಮೂಲಕ ಶಿಕ್ಷಕರ ಬಹುಹಿಂದಿನ ಬೇಡಿಕೆಯೊಂದನ್ನು ಪುರಸ್ಕರಿಸಿದೆ.
ಬೋಧನೇತರ ವಿಷಯಗಳ ಜವಾಬ್ದಾರಿಯನ್ನು ಶಿಕ್ಷಕರ ಮೇಲೆ ಹೇರುವುದು ಶಿಕ್ಷಣ ಕಾಯಿದೆಯ 27ನೇ ಕಲಂನ ಉಲ್ಲಂಘನೆಯಾಗುತ್ತದೆ. ಕಲಂ 27ರಲ್ಲಿ ಜನಗಣತಿ, ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ಮತ್ತು ಸ್ಥಳೀಯ, ರಾಜ್ಯ ಅಥವಾ ಲೋಕಸಭಾ ಚುನಾವಣೆಯ ಸಮಯದ ಹೊರತು ಇತರ ಯಾವುದೇ ಬೋಧನೇತರ ಚಟುವಟಿಕೆಗಳಲ್ಲಿ ಶಿಕ್ಷಕರನ್ನು ನೇಮಿಸಬಾರದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಹೇಳಿದೆ. ಮಹಾರಾಷ್ಟ್ರ ಸರಕಾರವು ಶಿಕ್ಷಕರು ತಿಂಗಳಿಗೊಮ್ಮೆ ಬಿಸಿಯೂಟ ತಯಾರಿಸುವ ಅಡುಗೆ ಕೋಣೆಯ ಶುಚಿತ್ವದ ಬಗ್ಗೆ ಪರಿಶೀಲನೆ ನಡೆಸಬೇಕು ಮತ್ತು ಮಕ್ಕಳಿಗೆ ಊಟ ಬಡಿಸುವ ಮುನ್ನ ಶಿಕ್ಷಕರು ಆಹಾರದ ರುಚಿ ನೋಡಬೇಕೆಂದು ಸೂಚಿಸಿತ್ತು. ಈ ಆದೇಶದ ವಿರುದ್ಧ ಮಹಿಳಾ ಸಂಘಟನೆ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಬಿಸಿಯೂಟ ಯೋಜನೆಯು ಸಮಾಜಮುಖಿ ಯೋಜನೆಯಾದರೂ ಬೋಧನೆಗೆ ಸಂಬಂಧಿಸಿದ್ದಲ್ಲವಾದ್ದರಿಂದ ಶಿಕ್ಷಕರಿಗೆ ಅದರ ಜವಾಬ್ದಾರಿ ನೀಡುವುದು ಸರಿಯಲ್ಲ ಎಂದು ಹೇಳಿದೆ.
