ದೆಹಲಿ: ಹತ್ತು ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ದೇಶವನ್ನು ಆರ್ಥಿಕ ದಿವಾಳಿಯತ್ತ ಕೊಂಡೊಯ್ದಿದೆ. ಹತ್ತು ಹಲವು ಜನಪ್ರಿಯ ಯೋಜನೆಗಳಿಗೆ ದುಡ್ಡನ್ನು ಪೋಲು ಮಾಡಿರುವುದಲ್ಲದೆ ರಾಜ್ಯಗಳ ಆದಾಯಕ್ಕೆ ದಾರಿಯಾಗಿದ್ದ ಸಿಎಸ್ ಟಿ ತೆಗೆದುಹಾಕಿ ಜಿಎಸ್ ಟಿ ಜಾರಿಗೆ ತಂದ ಕಾರಣ ವಿವಿಧ ರಾಜ್ಯಗಳಿಗೆ ಐವತ್ತು ಸಾವಿರ ಕೋಟಿ ಹಣ ಸಂದಾಯ ಮಾಡಬೇಕಾದ ಅನಿವಾರ್ಯತೆಯಿದೆ. ಇನ್ನು ತೈಲ ಕಂಪನಿಗಳಿಗೆ ಕೇಂದ್ರ ಸರಕಾರ ಮೂವತ್ತೈದು ಸಾವಿರ ಕೋಟಿ ಬಾಕಿ ಉಳಿಸಿದ್ದು ಇದನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಪಾವತಿಸದಿದ್ದರೆ ತೈಲ ಕಂಪನಿಗಳು ಮಕಾಡೆ ಮಲಗಬೇಕಾದ ಪರಿಸ್ಥಿತಿಯಿದೆ. ಬ್ಯಾಂಕುಗಳಲ್ಲಿ ಪಾವತಿಯಾಗದ ಸಾಲಗಳ ಮೊತ್ತ ವಿಪರೀತವಾಗಿ ಏರಿದೆ. 2008-09ರ ಅವಧಿಯಲ್ಲಿ 68,220 ಕೋಟಿಯಿದ್ದ ಮೊತ್ತ 2012-13ರ ಸಾಲಿನಲ್ಲಿ 1,94,000ಕ್ಕೆ ಬಂದು ನಿಂತಿದೆ.
ಈ ಮೊತ್ತವನ್ನು ಸರಕಾರವೇ ಬ್ಯಾಂಕ್ಗಳಿಗೆ ಪಾವತಿಸಬೇಕಿದೆ. ಸೋನಿಯಾ ಗಾಂಧಿಯ ಬಹುನೆಚ್ಚಿನ ಆಹಾರ ಸಬ್ಸಿಡಿ ಕಾಯಿದೆಯ ಬಾಬ್ತು 88,250 ಕೋಟಿ ಪಾವತಿಯಾಗಬೇಕಿದೆ. ಒಟ್ಟಾರೆಯಾಗಿ ನಿರಂತರ ಎರಡು ಅವಧಿಗೆ ಆಡಳಿತ ನಡೆಸಿರುವ ಯುಪಿಎ ಸರಕಾರ ಮುಂದಿನ ಚುನಾವಣೆ ಬರುವ ಹೊತ್ತಿಗೆ ದೇಶದ ಆರ್ಥಿಕತೆಯನ್ನು ಪಾತಾಳಕ್ಕೆ ತಲುಪಿಸಿದ್ದು ಮುಂದೆ ಆಡಳಿತಕ್ಕೆ ಬರುವ ಯಾವುದೇ ಸರಕಾರಕ್ಕೆ ದೇಶದ ಆರ್ಥಿಕತೆಯನ್ನು ಸುಧಾರಿಸುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.


