ಕೈಕಂಬ:ಗುರುಪುರದ ಜಂಗಮ ಮಠ ರಸ್ತೆಯಲ್ಲಿರುವ ಚಾಮಾಣಿಯಲ್ಲಿರುವ ಹಳೆ ಮನೆಯೊಂದಕ್ಕೆ ಸಿಡಿಲು ಬಡಿದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಇದರಿಂದ 70,000 ರೂಪಾಯಿಯಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಜೋರಾದ ಗಾಳಿ ಮಳೆಗೆ ಗಣಪತಿ ಪ್ರಭು ಎಂಬವರ ಮನೆಯ ಅಡುಗೆ ಕೋಣೆಯ ಗೋಡೆಗೆ ಸಿಡಿಲು ಬಡಿದಿದೆ. ಸಿಡಿಲಾಘಾತಕ್ಕೆ ಇಟ್ಟಿಗೆ ಗೋಡೆ ಬಿರುಕು ಬಿಟ್ಟು ಕುಸಿದಿದೆ. ಆಗ ಗಣಪತಿ ಪ್ರಭು, ಅವರ ಪತ್ನಿ ಹಾಗೂ ಮಕ್ಕಳ ಸಹಿತ ಇತರ ಐವರು ಮನೆಯ ಎದುರಿನ ಕೋಣೆಯಲ್ಲಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಳೆ ಮನೆಯ ಒಂದು ಗೋಡೆ ಕುಸಿದು ಅಪಾಯದಂಚಿಗೆ ಸಿಲುಕಿದ ಮನೆಯೇ ಕುಸಿದು ಬೀಳಬಹುದೆಂಬ ಭೀತಿಯಿಂದ ಗುರುವಾರ ಬೆಳಿಗ್ಗೆಯೇ ಗೋಡೆ ದುರಸ್ತಿ ಕಾರ್ಯ ಆರಂಭಿಸಲಾಗಿದೆ. ಘಟನಾ ಸ್ಥಳಕ್ಕೆ ಗುರುಪುರ ಪಂಚಾಯತ್ ಉಪಾಧ್ಯಕ್ಷ ಜಿ ಎಂ ಉದಯ ಭಟ್ ಭೇಟಿ ನೀಡಿ ಪರಿಶೀಲಿಸಿ ಪರಿಹಾರಕ್ಕಾಗಿ ಗ್ರಾಮ ಕರಣಿಕರ ಮೂಲಕ ತಹಶೀಲ್ದಾರರಿಗೆ ಶಿಫಾರಸು ಮಾಡಿದರು.
