ಬಜ್ಪೆ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಸರಗೋಡು ಪ್ರಯಾಣಿಕರಿಗೆ ಅಧಿಕಾರಿಗಳು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ, ಇದು ನಿಲ್ಲಬೇಕು ಹಾಗೂ ಈ ರೀತಿ ಕಿರುಕುಳ ನೀಡುವ ಅಧಿಕಾರಿಗಳನ್ನು ಬದಲಿಸಬೇಕೆಂದು ಆಗ್ರಹಿಸಿ ಕೇರಳ ರಾಜ್ಯದ ಯೂತ್ ಮುಸ್ಲಿಂ ಲೀಗ್ ವತಿಯಿಂದ ಏರ್‍ಪೋರ್ಟ್ ಸಮೀಪ ಬುಧವಾರ ಬೆಳಗ್ಗಿನ ಜಾವ ಪ್ರತಿಭಟನೆ ನಡೆಸಿದರು.
ಸಂಘಟನೆಯ ಮಂಜೇಶ್ವರ ವಲಯದ ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ಮಾತನಾಡಿ, ಕೇರಳ ರಾಜ್ಯದವರಿಗೆ ಮಂಗಳೂರು ವಿಮಾನನಿಲ್ದಾಣ ಅತಿ ಮುಖ್ಯವಾಗಿದ್ದು, ಮುಖ್ಯವಾಗಿ ಕಾಸರಗೋಡು, ಮಂಜೇಶವರ ವಿಭಾಗದ ಪ್ರಯಾಣಿಕರು ಇದನ್ನೇ ಬಳಸುತ್ತಾರೆ. ದುಃಖಕರ ವಿಚಾರವೆಂದರೆ ಇಲ್ಲಿನ ಅಧಿಕಾರಿಗಳು ಕಾಸರಗೋಡು ಪ್ರಯಾಣಿಕರನ್ನು ವಿಚಾರಣೆ ನೆಪದಿಂದ ಅನಗತ್ಯ ಕಿರುಕುಳ ನೀಡುತ್ತಾರಲ್ಲದೆ, ಅವರ ಜೊತೆ ಯಾವಾಗಲೂ ಅನುಚಿತ ವರ್ತನೆ ತೋರುತ್ತಾರೆ. ಅನಗತ್ಯವಾಗಿ ಬಂಧಿಸಿ ಗಂಟೆಗಟ್ಟಲೆ ಕಿರುಕುಳ ನೀಡುತ್ತಾರೆ. ಈ ಬಗ್ಗೆ ಕೇರಳ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಏರ್‍ಪೋರ್ಟ್ ನಿರ್ದೇಶಕ ಜೆ.ಟಿ. ರಾಧಾಕೃಷ್ಣ ಅವರಿಗೂ ಮನವಿ ಮಾಡಲಾಗಿತ್ತರೂ ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದರು.

9 bajpe 1

9 bajpe 2

9 bajpe 3
ಅಮಾಯಕನೋರ್ವನಿಗೆ ಅಧಿಕಾರಿಗಳು ನೀಡಿದ ಕಿರುಕುಳದ ಬಗ್ಗೆ ಉದಾಹರಣೆ ನೀಡಿದ ಅವರು, ಕೆಲವು ತಿಂಗಳ ಹಿಂದೆ ಅಬ್ದುಲ್ ಖಾದರ್ ಎಂಬವರು ಕಾಸರಗೋಡಿನಿಂದ ದುಬೈನಿಂದ ಮರಳುತ್ತಿದ್ದರು. ಅವರು ತನ್ನ ಮಗನಿಗಾಗಿ ಐಪಾಡ್ ಖರೀದಿಸಿದ್ದರು. ಏರ್‍ಪೋರ್ಟ್‍ಗೆ ಬಂದಿಳಿದ ಖಾದರ್ ಅವರನ್ನು ತಡೆದ ಕಸ್ಟಮ್ ಅಧಿಕಾರಿಗಳು ಇದನ್ನು ಬಾಂಬ್ ಎಂದು ಹೇಳಿಬಿಟ್ಟರು. ಪೊಲೀಸರು ಗಂಟೆಗಟ್ಟಲೆ ವಿಚಾರಣೆ ನಡೆಸಿದರಲ್ಲದೆ, ಮಾಧ್ಯಮಗಳು ಆತನ ಬಗ್ಗೆ ಇಲ್ಲಸಲ್ಲದ ಪ್ರಸಾರ ಮಾಡಿದವಲ್ಲದೆ, ಆತನ ಮನೆಗೆ ಭೇಟಿ ನೀಡಿ ಕಿರುಕುಳ ನೀಡಿದ್ದರು. ಆದರೆ ದೆಹಲಿಯ ಅಧಿಕಾರಿಗಳು ಪರಿಶೀಲಿಸಿದ ನಂತರ ಅದು ಹಾಳಾದ ಐಪಾಡ್ ಆಗಿದ್ದು ಅದನ್ನು ರಿಪೇರಿ ಮಾಡಲೆಂದು ದುಬೈಗೆ ಕೊಂಡೊಯ್ದಿದ್ದರು ಎಂಬ ವಿಚಾರ ಬೆಳಕಿಗೆ ಬಂದಿತೆಂದರು. ಇನ್ನೊಂದು ಉದಾಹರಣೆ ನೀಡಿದ ಅವರು, ರಣಜಿ ಆಟಗಾರ ಮುಹಮ್ಮದ್ ಅಝರುದ್ದೀನ್ ದೋಹಾಕ್ಕೆ ಹೋಗುತ್ತಿದ್ದಾಗ ಪರಿಶೀಲನೆ ನಡೆಸಿದ ಅಧಿಕಾರಿಗಳು ಆತನ ಬಳಿಯಿದ್ದ ಪಾಸ್‍ಪೋರ್ಟ್ ನಕಲಿ ಎಂದುಬಿಟ್ಟರು. ಗಂಟೆಗಟ್ಟಲೆ ವಿಚಾರಣೆ ನಡೆಸಿದಾಗ ಅದು ಅಸಲಿ ಎಂದು ಗೊತ್ತಾಯಿತ್ತಲ್ಲದೆ ಅಧಿಕಾರಿಗಳು ಕ್ಷಮಿಸಿ ಎಂದಷ್ಟೇ ಹೇಳಿ ಕೈತೊಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಮಂಜೇಶ್ವರದ ಶಾಸಕ ಪಿ.ಬಿ. ಅಬ್ದುಲ್ ರಝಾಕ್ ಮಾತಾಡಿ, ನಾವು ಮಹಾರಾಷ್ಟ್ರ-ಮಂಗಳೂರು ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಗೆ ವಿರೋಧ ವ್ಯಕ್ತಪಡಿಸಿ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾನ ಆಗಬೇಕೆಂಬ ಹೋರಾಟಕ್ಕೆ ಬೆಂಬಲ ನೀಡಿದ್ದೇವೆ. ಪರಿಶೀಲನೆ ನಡೆಸಬಾರದು ಎಂದೇನು ಹೇಳುವುದಿಲ್ಲ. ಆದರೆ ಕಾಸರಗೋಡಿನ ಪ್ರಯಾಣಿಕರನ್ನೇ ದೃಷ್ಟಿಯಲ್ಲಿರಿಸಿ ಅನಗತ್ಯ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಒಂದು ವೇಳೆ ಇಲ್ಲಿನ ಅಧಿಕಾರಿಗಳು ಕಾಸರಗೋಡು ಪ್ರಯಾಣಿಕರಿಗೆ ಅನಗತ್ಯ ಕಿರುಕುಳ ನೀಡುವುದನ್ನು ನಿಲ್ಲಿಸದೇ ಇದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೇರಳದ ಕಣ್ಣೂರಿನಲ್ಲಿ ವಿಮಾನ ನಿಲ್ದಾಣವಾಗುವ ಬಗ್ಗೆ ಪ್ರಸ್ತಾಪಿಸಿದ ಅವರು ಮಂಗಳೂರು ಏರ್‍ಪೋರ್ಟ್ ನಮ್ಮದು, ನಾವು ಇಲ್ಲಿಂದಲೇ ಪ್ರಯಾಣಿಸುವುದು ಎಂದುತ್ತರಿಸಿದ್ದಾರೆ.
ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬಾಕ್ಸ್:
ಪ್ರತಿಭಟನಾಕಾರರ ಆರೋಪಕ್ಕೆ ಪ್ರತಿಕ್ರಿಯಿಸಿದ ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ಜೆ.ಟಿ. ರಾಧಾಕೃಷ್ಣ, ಪ್ರತಿದಿನ ಸುಮಾರು 2000 ಪ್ರಯಾಣಿಕರು ಇಲ್ಲಿಂದ ಪ್ರಯಾಣಿಸುತ್ತಿದ್ದಾರೆ. ಕೆಲವೊಮ್ಮೆ ಅನುಮನಾಸ್ಪದ ವಸ್ತುಗಳು ಕಂಡುಬಂದರೆ, ಅನುಮಾನಾಸ್ಪದವಾಗಿ ವರ್ತಿಸಿದರೆ ನಿಲ್ದಾಣದ ಸುರಕ್ಷತೆಯ ದೃಷ್ಟಿಯಿಂದ ಪರಿಶೀಲನೆ ನಡೆಸಬೇಕಾಗುತ್ತದೆ. ಆದರೆ ಇಡೀ ದೇಶದಲ್ಲಿ ಗ್ರಾಹಕರಿಗೆ ಸಂತೃಪ್ತಿ ಸಿಗುವಲ್ಲಿ ಮಂಗಳೂರು ಏರ್‍ಪೋರ್ಟ್ ಎರಡನೇ ಸ್ಥಾನದಲ್ಲಿದೆ ಎಂದುತ್ತರಿಸಿದ್ದಾರೆ.

By Suddi9

Leave a Reply

Your email address will not be published. Required fields are marked *