ಮಂಗಳೂರು : ಒಂದು ಕೋಟಿ ಉದ್ಯೋಗ ಸೃಷ್ಠಿ, ಕರ್ನಾಟಕ ಅಗ್ರಿಕಲ್ಚರಲ್ ಕಾರಿಡಾರ್ ನಿರ್ಮಾಣ ಸೇರಿದಂತೆ ಹಲವಾರು ಭರವಸೆಗಳುಳ್ಳ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ನಗರದ ಟಿಎಂಎಪೈ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನದ ಮಾತನ್ನು ಮನ್ ಕಿ ಬಾತ್’ನಲ್ಲಿ ಹೇಳುತ್ತಾರೆ. ಆದರೆ ನಮ್ಮ ಪ್ರಣಾಳಿಕೆಯಲ್ಲಿ ಕರ್ನಾಟಕ ರಾಜ್ಯದ ಜನತೆಯ ಮನದ ಮಾತನ್ನು ಅಳವಡಿಸಲಾಗಿದೆ. ಕಾಂಗ್ರೆಸ್ ಪ್ರಣಾಳಿಕೆ ರಾಜ್ಯದ ಜನತೆಯ ಧ್ವನಿಯಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಜೆಪಿಯಂತೆ ಕೇವಲ ನಾಲ್ಕೈದು ಜನ ಸೇರಿ ತಯಾರಿಸಿದ ಪ್ರಣಾಳಿಕೆಯಲ್ಲ; ಬಿಜೆಪಿ ಪ್ರಣಾಳಿಕೆಯಲ್ಲಿ ರೆಡ್ಡಿ ಸಹೋದರರ ಪ್ರಭಾವ ಇರಲಿದೆ, ಭ್ರಷ್ಟಾಚಾರ ಇರಲಿದೆ, ಅದು ಆರ್ಎಸ್ಎಸ್ ಪ್ರಣಾಳಿಕೆಯಾಗಲಿದೆ. ಅವರು ಬಸವಣ್ಣನಿಗೆ ಕೈ ಮುಗಿದು, ಹಾರ ಹಾಕಿ ನಮಸ್ಕರಿಸಬಹುದು, ಆದರೆ ಬಸವಣ್ಣನ ತತ್ವಗಳಿಗೆ ಬದ್ಧರಾಗಿಲ್ಲ ಟೀಕಿಸಿದರು.
ಈ ಬಾರಿ ಕರ್ನಾಟಕ ರಾಜ್ಯದ ಪ್ರದೇಶಾವಾರು ಜನರ ಸಮಸ್ಯೆಗಳನ್ನು ಆಲಿಸಿ, ಸರ್ಕಾರದಿಂದ ಜನರಿಗೆ ಏನು ಬೇಕು ಎಂಬುದನ್ನು ತಿಳಿದು, ಕುಂದು ಕೊರತೆಗಳ ಪಟ್ಟಿ ತಯಾರಿಸಿ, ಕಾಂಗ್ರೆಸ್ ಪ್ರಣಾಳಿಕೆ ತಯಾರಿಸಲಾಗಿದೆ. ಕಳೆದ ವರ್ಷ ನಮ್ಮ ಪಕ್ಷ ನೀಡಿದ್ದ ಭರವಸೆಗಳಲ್ಲಿ ಶೇ.95 ಭಾಗ ಈಡೇರಿಸಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ. ಇದೇ ಕಾಂಗ್ರೆಸ್ ಹಾಗೂ ಬಿಜೆಪಿಗೆ ಇರುವ ವ್ಯತ್ಯಾಸ ಎಂದು ನಿದರ್ಶನಗಳ ಮೂಲಕ ವಿವರಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್, ಕಾಂಗ್ರೆಸ್ ಹಿರಿಯ ನಾಯಕರಾದ ವೀರಪ್ಪ ಮೊಯ್ಲಿ, ಜನಾರ್ದನ್ ಪೂಜಾರಿ ಕಾಗ್ರೆಸ್ ಮುಖಂಡ ಎಂ.ವೀರಪ್ಪ ಮೊಯ್ಲಿ, ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಇತರ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

