ಅಡ್ಡೂರು: ಕಥುವಾ ಬಾಲಕಿ ಮೇಲಿನ ಅತ್ಯಾಚಾರ, ಕೊಲೆನಡೆಸಿರುವುದನ್ನು ಖಂಡಿಸಿ ಅಡ್ಡೂರು ನಾಗರಿಕ ಹೋರಾಟ ಸಮಿತಿ ವತಿಯಿಂದ ಎಫ್ ಸಿಕೆ ಕೆಳಗಿನಕೆರೆ ಸಹಯೋಗದಲ್ಲಿ ರವಿವಾರ ಇಲ್ಲಿನ ಮುಖ್ಯ ಜಂಕ್ಷನ್ ನಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಗೊಳಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಚೊಕ್ಕಬೆಟ್ಟು ಜುಮಾ ಮಸೀದಿ ಖತೀಬ್ ಅಝೀಝ್ ದಾರಿಮಿ, ಕಥುವಾ ಬಾಲಕಿ ಮೇಲೆ ನಡೆದ ಕ್ರೌರ್ಯ, ಮುಸ್ಲಿಂ ಜನಾಂಗದ ಮೇಲೆ ಅಲ್ಲ. ಅದು ಮಾನವೀಯತೆ ಮೇಲೆ ನಡೆದ ಕ್ರೌರ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಪೊರಕೆ ಇಡಿದು ಸ್ವಚ್ಛ ಅಭಿಯಾನ ಕೈಗೊಂಡರೆ ದೇಶ ನಿರ್ಮಲವಾಗುವುದಿಲ್ಲ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಜಾರಿಗೊಳಿಸಿದಾಗ ಮಾತ್ರ ಈ ದೇಶ ಸ್ವಚ್ಛ, ನಿರ್ಮಲವಾಗಲು ಸಾಧ್ಯ ಎಂದು ಹೇಳಿದರು.
ದೇಶದಲ್ಲಿ ದುಷ್ಟ ಶಕ್ತಿಗಳು ಬೆಳೆಯುತ್ತಿದ್ದು, ಇದನ್ನು ಸಂಹಾರ ಮಾಡಲು ನಾಗರಿಕರಲ್ಲಿ ಪ್ರಜ್ಞಾವಂತಿಕೆ ಅನಿವಾರ್ಯವಾಗಿದೆ. ದೇಶದ ನಾಗರಿಕರು ಜಾತಿ-ಭೇದ ಮರೆತು ತಮ್ಮ ಮಕ್ಕಳಿಗೆ ಕುಥುವಾದ ಸಂತ್ರಸ್ತೆ ಬಾಲಕಿಯ ಹೆಸರನ್ನು ನಾಮಕರಣಗೊಳಿಸುವುದು ಮತಾಂತರ ಅಲ್ಲ. ಅದು ಮನಸಾಂತರ ಎಂದವರು, ದೇಶಕ್ಕೆ ಅಚ್ಛೇದಿನ್ ಬದಲು ಅತ್ಯಾಚಾರ ದಿನ್ ಬಂದೊದಗಿದೆ ಎಂದು ಟೀಕಿಸಿದರು.
ಮುಂದಿನ ದಿನಗಳಲ್ಲಿ ಸಂತ್ರಸ್ತ ಮಹಿಳೆಯರು ತಮ್ಮ ನ್ಯಾಯಕ್ಕಾಗಿ ನೇಣಿನ ಹಗ್ಗ ಹಿಡಿದು ಪ್ರತಿಭಟಿಸುವ ಸಂದಿಗ್ಧ ಪರಿಸ್ಥಿತಿ ದೇಶಕ್ಕೆ ಎದುರಾಗಬಹುದು. ಆದ್ದರಿಂದ ಇಲ್ಲಿನ ನ್ಯಾಯಾಲಯಗಳು ಎಚ್ಚೆತ್ತು ಅತ್ಯಾಚಾರಿ ಅಪರಾಧಿಗಳಿಗೆ ಗುಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ ಅವರು, ಭಾರತ ಮಾತೆಗೆ ಜೈಕಾರ ಹಾಕುವವರು ಇಂದು ಮಹಿಳೆ, ಬಾಲೆಯರನ್ನು ಭೋಗಿಸುತ್ತಿದ್ದು, ಇವರಿಂದ ನಾವೇನು ಕಲಿಯಲು ಸಾಧ್ಯ ಎಂದು ಪ್ರಶ್ನಿಸಿದರು.
ದೇಶದಲ್ಲಿ ನಡಯತ್ತಿರುವ ಅತ್ಯಾಚಾರ ಪ್ರಕರಣದ ಬಗ್ಗೆ ಸಮರ್ಥಿಸಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ನನ್ನು ನರೇಂದ್ರ ಮೋದಿಯವರು ಸಂಪುಟದಿಂದ ಕಿತ್ತೊಗೆಯಲಿ ಎಂದು ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಬಾಳಿಲ ಮಾತನಾಡಿ, ಹನ್ನೆರಡು ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ಸೇರಿದಂತೆ ಮರಣದಂಡನೆ ವಿಧಿಸುವ ಸುಗ್ರೀವಾಜ್ಞೆಯಲ್ಲಿ ಮಹಿಳೆಯರಿಗೆ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಯಾವುದೇ ಅತ್ಯಾಚಾರಿಗೂ ಮರಣದಂಡನೆಗೆ ಗುರಿಪಡಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಹೈದರ್ ದಾರಿಮಿ, ಮಜೀದ್ ದಾರಿಮಿ, ಉಪನ್ಯಾಸಕ ಎಂ.ಎ.ಮೊಹಮ್ಮದ್ ಕುಂಞಿ ಮಾಸ್ಟರ್ , ಅಡ್ಡೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಶರೀಫ್ ದಾರಿಮಿ, ಎಫ್ ಸಿಕೆ ಅಧ್ಯಕ್ಷ ಫರ್ವೀಝ್, ಸಮಾಜಿಕ ಕಾರ್ಯಕರ್ತ ಯು.ಪಿ.ಇಬ್ರಾಹೀಂ, ಪಿಎಫ್ ಐ ವಲಯಾಧ್ಯಕ್ಷ ಹಕೀಂ ಪಾಂಡೇಲ್, ಎಸ್ಕೆಸ್ಸೆಫ್ ಕ್ಲಸ್ಟರ್ ಅಧ್ಯಕ್ಷ ಬಾತೀಶ್ ಸಾಗರ್, ಎಸ್ ವೈಸ್ ವಲಯಾಧ್ಯಕ್ಷ ಅಬ್ದುಲ್ ರಹಿಮಾನ್, ಎಸ್ ಡಿಪಿಐ ವಲಯಾಧ್ಯಕ್ಷ ಮುಸ್ತಫಾ ಮತ್ತಿತರರು ಉಪಸ್ಥಿತರರಿದ್ದರು.
ಫಾರೂಕು ಕೆಳಗಿನಕೆರೆ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರಧಾನಿಗೆ ನೇರ ಪ್ರಶ್ನೆ: ಮುಸ್ಲಿಂ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರಿಗೆ ತಲಾಖ್ ವಿಚಾರದಲ್ಲಿ ನ್ಯಾಯ ಒದಗಿಸಲು ಮುತವರ್ಜಿವಹಿಸಿದ ಪ್ರಧಾನಿ ಮೋದಿಯವರಿಗೆ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯದ ಬಗ್ಗೆ ಕ್ರಮ ಕೈಗೊಳ್ಳಲು ಮುತವರ್ಜಿವಹಿಸಿಲ್ಲವೇಕೆ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಜಬ್ಬಾರ್ ಪ್ರತಿಭಟನೆಯಲ್ಲಿ ಪ್ರಶ್ನಿಸಿದ್ದಾರೆ.




