ಕುಪ್ಪೆಪದವು: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸ ಬಯಸಿದ್ದ ಜೆಡಿಎಸ್ ಮುಖಂಡ, ಕುಪ್ಪೆಪದವು ಪಂಚಾಯತ್ ಉಪಾಧ್ಯಕ್ಷ ಡಿ.ಪಿ. ಹಮ್ಮಬ್ಬ ಅವರಿಗೆ ಜೆಡಿಎಸ್ ಬಿ-ಫಾರ್ಮ್ ನೀಡಲು ನಿರಾಕರಿಸಿದ ಹಿನ್ನೆಲೆ ಮಂಗಳವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನ ಅಧ್ಯಕ್ಷರಾಗಿದ್ದ, ಸದ್ಯ ಕುಪ್ಪೆಪದವು ಪಂಚಾಯತ್‍ನ ಉಪಾಧ್ಯಕ್ಷ ಆಗಿರುವ ಕುಪ್ಪೆಪದವಿನ ಡಿ.ಪಿ ಹಮ್ಮಬ್ಬ ಅವರು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಬಯಸಿದ್ದರು. ಅಲ್ಲದೆ ಜೆಡಿಎಸ್‍ನಿಂದ ಇದುವರೆಗೆ ಬೇರೆ ಯಾವ ಮುಖಂಡರು ಸ್ಪರ್ಧಿಸಲು ಆಸಕ್ತಿ ತೋರಿರಲಿಲ್ಲ. ಡಿ.ಪಿ. ಹಮ್ಮಬ್ಬ ಅವರು ಏಕೈಕ ಆಕಾಂಕ್ಷಿಯಾಗಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಜೆಡಿಎಸ್‍ನಿಂದ ನಾಮಪತ್ರ ಸಲ್ಲಿಸಿದ್ದರು. ಆದರೆ ಇಂದು ಜೆಡಿಎಸ್‍ನಿಂದ ಬಿ-ಫಾರ್ಮ್ ಸಿಗದ ಕಾರಣ ಸಿಟ್ಟುಗೊಂಡ ಡಿ.ಪಿ ಹಮ್ಮಬ್ಬ ಅವರು ತನ್ನ ನಾಲ್ಕು ನೂರಕ್ಕಿಂತಲೂ ಅಧಿಕ ಮಂದಿ ಬೆಂಬಲಿಗರ ಜತೆ ತೆರಳಿ ಬೆಳಿಗ್ಗೆ 11.30ರ ಸುಮಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಿ ಬಳಿಕ ಮಾತನಾಡಿದ ಹಮ್ಮಬ್ಬ, ಜೆಡಿಎಸ್‍ನಿಂದ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ವತಿಯಿಂದ ಸ್ಪರ್ಧಿಸಲು ಮುಂದಾಗಿದ್ದೆ. ಆದರೆ ಜೆಡಿಎಸ್ ಮುಖಂಡರಾಗಿರುವ ಬಿಎಂ ಫಾರೂಕ್ ಅವರ ಸಹೋದರ ಬಿ.ಎ ಮೊಹಿನುದ್ದೀನ್ ಬಾವಾ ಅವರು ಕಾಂಗ್ರೆಸ್‍ನಿಂದ ಸ್ಪರ್ಧಿಸಿದ ಕಾರಣ, ಇದರಿಂದ ತನ್ನ ಸಹೋದರನಿಗೆ ಸೋಲುಂಟಾಗುತ್ತದೆ ಎಂಬ ಕಾರಣಕ್ಕೆ ಬಿಎಂ ಫಾರೂಕ್ ಅವರು ನನಗೆ ಬಿ-ಫಾರ್ಮ್ ತಪ್ಪಿಸಿದ್ದಾರೆ ಎಂದು ಗಂಭೀರ ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ನಾನಿಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ ಎಂದು ಅವರು ತಿಳಿಸಿದರು.


