ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ದೈವದ ಅಪ್ಪಣೆಯಂತೆ ಜೀರ್ಣೋದ್ಧಾರ ನಿಮಿತ್ತ ಮಾ. 14ರಂದು ಸಂಜೆ ದೈವಸ್ಥಾನದಲ್ಲಿ ಪರಿಹಾರಾಧಿ ಪೂಜೆಯಾಗಿ `ಅಘೋರ ಪೂಜೆ’ ಹಾಗೂ 6,000 ಲಲಿತ ಸಹಸ್ರನಾಮ ಜಪ ಜರುಗಿತು. ಈ ದೈವೀ ಕಾರ್ಯದಲ್ಲಿ ಊರಿನ ನೂರಾರು ಭಕ್ತರು ಸೇರಿದ್ದರು.
ಈ ಸಂದರ್ಭದಲ್ಲಿ ಭಕ್ತರು ದೈವದ ಸಂಕಲ್ಪದಂತೆ ಪ್ರಥಮ ಹಂತದಲ್ಲಿ ಒಂದು ಹಿಡಿ ಕಾಣಿಕೆ(ಹುಂಡಿ), ಒಂದು ತೆಂಗಿನಕಾಯಿ ಮತ್ತು ಒಂದು ಸೇರು ಅಕ್ಕಿ ನೀಡಿದರು. ಮಾ. 15ರಂದು ಬೆಳಿಗ್ಗೆ ದೈವಸ್ಥಾನ ಆವರಣದಲ್ಲಿದ್ದ ಜಮೆ ಮಾಡಲಾದ ನಿಧಿ, ಅಕ್ಕಿ, ತೆಂಗಿನಕಾಯಿಯನ್ನು ಬ್ಯಾಂಡ್, ವಾಲಗದೊಂದಿಗೆ ಹತ್ತಿರದಲ್ಲಿರುವ ಭಂಡಾರದ ಮನೆಗೆ ಕೊಂಡೊಯ್ಯಲಾಯಿತು.
ವಿನಾಯಕ ಕಾರಂತ ಕಾವೂರು ಪೌರೋಹಿತ್ಯದಲ್ಲಿ ಅಘೋರ ಹೋಮ ಹಾಗೂ ಲಲಿತ ಸಹಸ್ರನಾಮ ಜಪ ಜರುಗಿತು. ತಂತ್ರಿ ಜಿ ಟಿ ಅಣ್ಣು ಭಟ್, ಗುರುಪುರ ಜಂಗಮ ಮಠದ ರುದ್ರಮುನಿ ಸ್ವಾಮಿ, ದೈವಸ್ಥಾನದ ಆಡಳಿತ ಮೊಕ್ತೇಸರ ಪ್ರಮೋದ್ ಕುಮಾರ್ ರೈ ಹಾಗೂ ಗುತ್ತು ಮನೆತನದ ಸುಧಾಕರ ಶೆಟ್ಟಿ, ವಿಲಾಸ್ ಶೆಟ್ಟಿ, ಪುರಂದರ ಮಲ್ಲಿ, ಡಾ. ರವಿರಾಜ ಶೆಟ್ಟಿ, ಚಂದ್ರಹಾಸ ಕಾವ, ವಿನಿಯ ಕುಮಾರ್ ಶೆಟ್ಟಿ, ಪದ್ಮನಾಭ ಶೆಟ್ಟಿ, ಸುಕುಮಾರ್ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ, ಸುಬ್ಬಯ್ಯ ಶೆಟ್ಟಿ, ರವೀಂದ್ರ ಶೆಟ್ಟಿ ಹಾಗೂ ದಾಮೋದರ ನಿಸರ್ಗ, ಚಂದ್ರಹಾಸ ಪೂಜಾರಿ ಕೌಡೂರು, ತನಿಯಪ್ಪ ಪೂಜಾರಿ, ಯಶವಂತ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಎಪ್ರಿಲ್ 4ರಂದು ನಡೆಯಲಿರುವ ರಕ್ಷೋಘ್ನ, ಅನುಜ್ಞಾ ಕಳಸದೊಂದಿಗೆ ಸಂಕೋಚ ವಿಧಿ-ವಿಧಾನದ ಬಳಿಕ ಜೀರ್ಣೋದ್ಧಾರದ ಎರಡನೇ ಹಂತದಲ್ಲಿ ದೈವಸ್ಥಾನದ ಮುಂಡಿತ್ತಾಯ, ಮೈಸಂದಾಯ, ಜುಮಾದಿ, ಬಂಟ, ಪರಿವಾರ ದೈವಗಳ ಎರಡು ಗುಡಿ ಮತ್ತು ಒಟ್ಟು ಪ್ರಾಂಗಣ ತೆರವು ಕಾರ್ಯ ಆರಂಭಗೊಳ್ಳಲಿದೆ.

