ಮೈಸೂರು: ಲೂಟಿಕೋರ, ದರೋಡೆಕೋರ, ಭ್ರಷ್ಟ ಅಶೋಕ್ ಖೇಣಿಯನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳುವ ಮೂಲಕ ಲೂಟಿಕೋರರು, ದರೋಡೆಕೋರರು ಕಾಂಗ್ರೆಸ್ ನಲ್ಲಿ ಇರಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರ
ಮಂಗಳವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಓರ್ವ ಭ್ರಷ್ಟ ಮುಖ್ಯಮಂತ್ರಿ. ಈ ಬಾರಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದವರು, ರಾಜ್ಯದ ಇತಿಹಾಸದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ನ ಕೊನೆಯ ಮುಖ್ಯಮಂತ್ರಿ ಎಂಬುದನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರನ್ನು ಮೈಸೂರು, ಚಾಮರಾಜನಗರ ಜಿಲ್ಲೆಗಳಿಗೆ ಕರೆದುಕೊಂಡು ಬನ್ನಿ. ನಮಗೂ ಒಳ್ಳೆಯದು. ಯಾಕೆಂದರೆ ರಾಹುಲ್ ಗಾಂಧಿ ಎಲ್ಲಿ ಹೋಗುತ್ತಾರೋ ಅಲ್ಲಿ ಕಾಂಗ್ರೆಸ್ ಸೋಲನುಭವಿಸುತ್ತದೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ರಾಜ್ಯದ ಕಾಂಗ್ರೆಸ್ ನ ಕೊನೆಯ ಮುಖ್ಯಮಂತ್ರಿಯಾಗಲಿದ್ದು, ಅವರು ಕಾಂಗ್ರೆಸ್ ಅನ್ನು ಮುಳುಗಿಸಿ ಹೋಗುತ್ತಾರೆ. ಕಾಂಗ್ರೆಸ್ ಮುಕ್ತ ಭಾರತ ನಮ್ಮ ಧ್ಯೇಯ, ಅದನ್ನು ನಾವು ಮಾಡುತ್ತೇವೆ. ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರ ಇದೆ. ಇಲ್ಲಿಯೂ ಈ ಬಾರಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

