ಮುದ್ದೇಬಿಹಾಳ: ತಾಲೂಕಿನ ನಾಗಬೇನಾಳ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಹಾಡಹಗಲೇ ನಡೆದಿರುವ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಖಂಡಿಸಿ ಮಾ.7 ರಂದು ಪಕ್ಷಾತೀತವಾಗಿ ಮುದ್ದೇಬಿಹಾಳ ಬಂದ್ ಕರೆ ನೀಡಲಾಗಿದೆ.
ಹೇಯಕೃತ್ಯ ಎಸಗಿರುವ ದುರುಳರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಮಾ.7 ರಂದು ಎಲ್ಲ ವ್ಯಾಪಾರ ವಹಿವಾಟು ಬಂದ್ ಮಾಡಲಾಗುವುದು. ಪಕ್ಷಾತೀತವಾಗಿ ನಡೆಯಲಿರುವ ಈ ಹೋರಾಟಕ್ಕೆ ಸ್ವಯಂಪ್ರೇರಿತರಾಗಿ ಬೆಂಬಲ ನೀಡಬೇಕು ಎಂದು ಬಿಜೆಪಿ ಮುಖಂಡ ಪರಶುರಾಮ ಪವಾರ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಸಂಗಮ್ಮ ದೇವರಳ್ಳಿ,ಮಹಿಳಾ ಒಕ್ಕೂಟದ ತಾಲೂಕಾಧ್ಯಕ್ಷೆ ಗಿರಿಜಾ ಕಡಿ ಮನವಿ ಮಾಡಿದ್ದಾರೆ.
ಆರೋಪಿಗಳ ಪರ ವಕಾಲತ್ತು ವಹಿಸದಿರಲು ನಿರ್ಧಾರ:
ಘಟನೆಯನ್ನು ಖಂಡಿಸಿ ಮಾ.7 ರಂದು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿಯುವುದಾಗಿ ಇಲ್ಲಿನ ವಕೀಲರ ಸಂಘದವರು ನಿರ್ಣಯ ಕೈಗೊಂಡು ಠರಾವು ಪಾಸು ಮಾಡಿದ್ದಾರೆ. ಮಂಗಳವಾರ ಸಂಜೆ ತುರ್ತು ಸಭೆ ನಡೆಸಿದ ವಕೀಲರ ಸಂಘದ ಪದಾಧಿಕಾರಿಗಳು,ಆರೋಪಿಗಳ ಪರ ಯಾವೊಬ್ಬ ವಕೀಲರು ವಕಾಲತ್ತು ವಹಿಸಿಕೊಳ್ಳುವುದಿಲ್ಲ.ಜಾಮೀನಿಗೆ ಅರ್ಜಿ ಸಲ್ಲಿಸುವುದಿಲ್ಲ.ಬುಧವಾರದಂದು ಕೋರ್ಟ್ ಕಲಾಪ ಬಹಿಷ್ಕರಿಸುವುದಾಗಿ ಸಂಘದ ಅಧ್ಯಕ್ಷ ಎಸ್.ಎಸ್.ಪಾಟೀಲ,ಸಹಕಾರ್ಯದರ್ಶಿ ಆರ್.ಎಸ್.ಬಿರಾದಾರ ಕೋಶಾಧಿಕಾರಿ ಆರ್.ವಾಯ್ ನಾಲತವಾಡ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಯ ಮುಖಂಡರಾದ ಪುನೀತ ಹಿಪ್ಪರಗಿ,ಸಂತೋಷ ನಾಯಕ,ಹಣಮಂತ ಕಲ್ಯಾಣಿ,ಎಸ್.ಕೆ.ಘಾಟಿ,ರವಿ ನಾಲತವಾಡ,ರವೀಂದ್ರ ಬಿರಾದಾರ,ಪ್ರಕಾಶ ಚಲವಾದಿ,ನಾಗರಾಜ ಪಾತ್ರೋಟ,ಸಂಜೀವ ವಡ್ಡರ ಇತರರು ಇದ್ದರು.

