ಬೆಳಗಾವಿ: ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಕೀಳರಿಮೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದೇಶದಲ್ಲಿ ಲಿಂಗಾನುಪಾತವನ್ನು ಸರಿಸಮವಾಗಿಸಲು ಶ್ರಮಿಸುತ್ತಿದೆ. ಇದಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಮನೇಕಾ ಗಾಂಧಿ ಅವರು ಹೇಳಿದರು.
ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಕೇಂದ್ರ ಸಮಾಜ ಕಲ್ಯಾಣ ಮಂಡಳಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಗುರುವಾರ ಆಯೋಜಿಸಿದ್ದ ಕೌಟುಂಬಿಕ ಸಲಹಾ ಕೇಂದ್ರಗಳ ಪದಾಧಿಕಾರಿಗಳು ಹಾಗೂ ಇತರೆ ಮಧ್ಯಸ್ಥದಾರರ ಪೂರ್ವ ಸಿದ್ಧತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೌಟುಂಬಿಕ ಸಲಹಾ ಕೇಂದ್ರಗಳ ಪದಾಧಿಕಾರಿಗಳು ಹಾಗೂ ಇತರೆ ಮಧ್ಯಸ್ಥದಾರರು ತಮ್ಮ ಕಾರ್ಯವನ್ನು ಕಟ್ಟುನಿಟ್ಟಾಗಿ ಕೈಗೊಂಡು ಮಕ್ಕಳ ಮಾರಾಟ, ಭಾಲ್ಯವಿವಾಹ, ಭ್ರೂಣಹತ್ಯೆ, ಶಿಕ್ಷಣದ ಅರಿವು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಪಾಲಕರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಹೆಣ್ಣುಮಕ್ಕಳು ಋತುಚಕ್ರದ ಸಂದರ್ಭದಲ್ಲಿ ಸುರಕ್ಷತೆಯನ್ನು ಪಾಲಿಸದೇ ಆರೋಗ್ಯದ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಆ ಸಂದರ್ಭದಲ್ಲಿ ಹೆಣ್ಣುಮಕ್ಕಳು ಸ್ಯಾನಿಟರಿ ಪ್ಯಾಡ್‍ಗಳನ್ನು ಬಳಸಬೇಕು. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ಬಗ್ಗೆ ಸಲಹಾ ಕೇಂದ್ರಗಳ ಮಹಿಳಾ ಪದಾಧಿಕಾರಿಗಳು ಹೆಣ್ಣು ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಮಕ್ಕಳು ಅಪೌಷ್ಠಿಕತೆಯಿಂದ ಬಳಲಬಾರದೆಂಬ ಉದ್ದೇಶದಿಂದ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದೆ ಎಂದರು.
ಮಕ್ಕಳು ಹಾಗೂ ಮಹಿಳೆಯರ ಮಾರಾಟದಂತ ಘಟನೆಗಳು ಇಂದಿಗೂ ನಮ್ಮ ಸಮಾಜದಲ್ಲಿ ನಡೆಯುತ್ತಿರುವುದು ವಿಷಾದನೀಯ. ಇದನ್ನು ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ವಿವಿಧ ಕಾರ್ಯಕ್ರಮಗಳ ಮೂಲಕ ಪಾಲಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಡಿಸೆಂಬರ್ 31 ರೊಳಗಾಗಿ ದೇಶದಲ್ಲಿರುವ ಎಲ್ಲ ಅನಾಥಾಲಯಗಳನ್ನು ನೋಂದಣಿ ಮಾಡಿಸಬೇಕು. ಅನಾಥಾಲಯಗಳಿಂದ ಮಕ್ಕಳನ್ನು ಪಡೆಯಲು ಇಚ್ಛಿಸುವ ಪಾಲಕರು ಕೇಂದ್ರ ಸರ್ಕಾರದ ವೆಬ್‍ಸೈಟ್‍ನಲ್ಲಿ ಅರ್ಜಿ ಸಲ್ಲಿಸಬೇಕು. ಅನಾಥಾಲಯಗಳಿಂದ ಮಕ್ಕಳನ್ನು ಪಡೆಯುವ ಪಾಲಕರು ನೋಂದಣಿ ಮಾಡಿಸಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಬೇಟಿ ಬಚಾವೋ-ಬೇಟಿ ಪಡಾವೋ ಕಾರ್ಯಕ್ರಮ ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಇದು ಯಶಸ್ವಿಯಾಗಿದೆ. ಇದರಿಂದ ದೇಶದ ಅನೇಕ ಪಾಲಕರಲ್ಲಿ ಹೆಣ್ಣು ಮಕ್ಕಳ ಬಗ್ಗೆ ಗೌರವ, ಒಲವು ಮೂಡಿದೆ ಎಂದು ಹೇಳಿದರು.
ನಂತರ ವಿವಿಧ ರಾಜ್ಯಗಳ ಕೌಟುಂಬಿಕ ಸಲಹಾ ಕೇಂದ್ರಗಳ ಪದಾಧಿಕಾರಿಗಳೊಂದಿಗೆ ಸಂವಾದ ನಡೆಸಿದ ಸಚಿವರು, ಪದಾಧಿಕಾರಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.
ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಟಿ. ವೆಂಕಟಲಕ್ಷ್ಮೀ ಬಸವಲಿಂಗರಾಜು, ಕೇಂದ್ರದ ಸಮಾಜ ಕಲ್ಯಾಣ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀಮತಿ ನೀಲಂ ಭಾರದ್ವಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮುನಿರಾಜು, ಕೇಂದ್ರದ ಸಮಾಜ ಕಲ್ಯಾಣ ಮಂಡಳಿ, ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧಿಕಾರಿಗಳು, ವಿವಿಧ ರಾಜ್ಯಗಳ ಕೌಟುಂಬಿಕ ಸಲಹಾ ಕೇಂದ್ರಗಳ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

