ಕೈಕಂಬ: ಕುಪ್ಪೆಪದವು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಚಾರಿಜೋರ ಪ್ರದೇಶಕ್ಕೆ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡುವಂತೆ ಅಚಾರಿ ಜೋರ ಪ್ರದೇಶದ ಸಾರ್ವಜನಿಕರು ಗುರುವಾರ ಪಂಚಾಯತಿಗೆ ಘೆರಾವು ಹಾಕಿ ಪ್ರತಿಭಟನೆ ನಡೆಸಿದರು.
ನಮಗೆ ವಾರದಲ್ಲಿ ಒಂದು ದಿನ ಕೂಡ ಸಮರ್ಪಕವಾಗಿ ನೀರು ಬರುತ್ತಿಲ್ಲ ಆದರೆ ಕೆಲವು ಮನೆಗಳಿಗೆ ನೀರು ಕೊಟ್ಟು ತಾರತಮ್ಯ ಎಸಗುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪಂಪ್ ಆಪರೇಟರ್ ಬದಲು ಪಂಚಾಯತಿ ಸದಸ್ಯರೊಬ್ಬರು ತಮಗೆ ಬೇಕಾದಂತೆ ಗೇಟ್ವಾಲ್‍ಗಳನ್ನು ತಿರುಗಿಸಿ ನೀರು ಬಿಡುತ್ತಾರೆ ಎಂದು ಆರೋಪಿಸಿದಾಗ ಪಂಚಾಯತಿ ಸದಸ್ಯರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಜಟಾಪಟಿ ನಡೆಯಿತು.
ಇಲ್ಲಿಯ ಶಾಲೆಯ ಬಳಿಯಿರುವ ಬೋರ್ವೆಲ್ ನಿಂದ ನಿರಂತರವಾಗಿ ನೀರೆತ್ತುತ್ತಿದ್ದರು ನಮಗೆ ನೀರು ಸಮರ್ಪಕವಾಗಿ ಬರುವುದಿಲ್ಲ ಯಾರಿಗೆ ಸರಬರಾಜು ಮಾಡುತ್ತೀರಿ ಎಂದು ಗ್ರಾಮಸ್ತರು ಪ್ರಶ್ನಿಸಿದರು. ಅಚಾರಿ ಜೋರಕ್ಕೆ ನೀರು ಪೂರೈಸುವ ಪಡೀಲುಪದವು ಎಂಬಲ್ಲಿರುವ ಎರಡು ಬೋರ್ವೆಲ್ ಕೆಸರು ತುಂಬಿದ್ದು ನೀರಿನ ಕೊರತೆ ಉಂಟಾಗಿದೆ. ಇದರ ದುರಸ್ಥಿಗೆ ಜಿಲ್ಲಾ ಪಂಚಾಯತಿಗೆ ಮನವಿ ಸಲ್ಲಿಸಲಾಗಿದೆ. ದುರಸ್ತಿ ನಂತರ ನೀರು ಸರಬರಾಜು ಆಗಲಿದೆ ಎಂದು ಪಂಚಾಯತಿ ಅಧ್ಯಕ್ಷರು ಸಮಜಾಯಿಸಿದರು.
ಸರಕಾರಿ ಬೋರ್ ವೆಲ್‍ಗಳಲ್ಲಿ ನೀರಿನ ಕೊರತೆಯಾದಗ ಖಾಸಾಗಿ ಬೋರ್ವೆಲ್ ಗಳಿಂದ ನೀರು ಪೂರೈಸಿ ಎಂದು ಆಗ್ರಹಿಸಿದರು. ಅಂತಿಮವಾಗಿ ಸರಕಾರಿ ಬೋರ್ವೆಲ್ ಗಳು ದುರಸ್ತಿ ಆಗುವ ತನಕ ಖಾಸಾಗಿ ಬೋರ್ವೆಲ್ ಗಳಿಂದ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡುವುದಾಗಿ ಪಂಚಾಯತಿಯಿಂದ ಸ್ಪಷ್ಟ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಕಿಲಿಂಜಾರು ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿಗಾಗಿ ಅಚಾರಿಜೋರ ದೊಡ್ಡಲಿಕೆ ಎಂಬಲ್ಲಿ ಪಲ್ಘುಣಿ ನದಿಗೆ ಅಣೆಕಟ್ಟು ಕಟ್ಟುವಂತೆ ಒತ್ತಾಯ ಕೇಳಿಬಂತು ಈ ಕುರಿತಂತೆ ಶಾಸಕರು, ಜಿಲ್ಲಾ ಪಂಚಾಯತಿ ಸದಸ್ಯರು, ತಾಲೂಕು ಪಂಚಾಯತಿ ಸದಸ್ಯರ ಗಮನ ಸೆಳೆಯಲು ಮುಂದೆ ಪಕ್ಷಾತೀತವಾಗಿ ಪಂಚಾಯತಿಯ ಮುಂದೆ ಧರಣಿ ನಡೆಸುವುದೆಂದು ತೀರ್ಮಾನಿಸಲಾಯಿತು.
