ಮುಂಬೈ: ಹೆಸರಾಂತ ಸಾಹಿತಿ ಯಶವಂತ ಚಿತ್ತಾಲ ಅವರ ಧರ್ಮಪತ್ನಿ ಮಾಲತಿ ಚಿತ್ತಾಲ (84) ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
2014ರ ಮಾರ್ಚ್ 22ರಂದು ಸಾಹಿತಿ ಯಶವಂತ ಚಿತ್ತಾಲ ಅವರು ನಿಧನರಾಗಿದ್ದರು. ಆ ನಂತರದಲ್ಲಿ ಮಾಲತಿ ಚಿತ್ತಾಲ ಅವರು ಮುಂಬೈನಲ್ಲಿ ತಮ್ಮ ಮಗ ಡಾ.ರವೀಂದ್ರ ಚಿತ್ತಾಲ ಅವರ ಮನೆಯಲ್ಲೇ ಇರುತ್ತಿದ್ದರು.
ಕಾರವಾರದ ಬಾಡ ಶಾಲೆಯಲ್ಲಿ ಯಶವಂತ ಚಿತ್ತಾಲ ಅವರು ಶಿಕ್ಷಕರಾಗಿದ್ದಾಗ ತಮ್ಮ ವಿದ್ಯಾರ್ಥಿನಿ ಮಾಲತಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಅಂದಿನಿಂದ ಯಶವಂತ ಚಿತ್ತಾಲರ ನೆರಳಾಗಿ, ಬೆಳಕಾಗಿ ಅವರು ಜೊತೆಯಲ್ಲಿದ್ದರು. ಸಾಹಿತ್ಯ ಪ್ರೇಮಿಯಾಗಿದ್ದ ಮಾಲತಿ ಅವರಿಗೆ ಸಾಹಿತ್ಯ ಕೃಷಿಕ ಯಶವಂತ ಚಿತ್ತಾಲರು ಸಂಗಾತಿಯಾಗಿದ್ದರು. ಯಶವಂತರ ಸಾಹಿತ್ಯ ಕೃಷಿಗೆ ಪತ್ನಿ ಸದಾ ಬೆಂಬಲವಾಗಿ ಇದ್ದರು.
‘ಶಿಕಾರಿ’, ‘ಪುರುಷೋತ್ತಮ’, ‘ಛೇದ’ದಂತಹ ಕಾದಂಬರಿಗಳು ಸಹಿತ ಕನ್ನಡ ಸಾಹಿತ್ಯಕ್ಕೆ ಯಶವಂತ ಚಿತ್ತಾಲರು ನೀಡಿದ ಕೊಡುಗೆಯನ್ನು ಸಾಹಿತ್ಯ ಪ್ರೇಮಿಗಳು ಎಂದಿಗೂ ನೆನಪಿಸಿಕೊಳ್ಳುತ್ತಾರೆ.
ಮಾಲತಿ ಚಿತ್ತಾಲರ ನಿಧನಕ್ಕೆ ಕನ್ನಡದ ಹೆಸರಾಂತ ಕಥೆಗಾರ, ಸಾಹಿತಿ ಜಯಂತ ಕಾಯ್ಕಿಣಿ ಸೇರಿ ಅವರ ಒಡನಾಡಿಗಳು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಚಿತ್ತಾಲ ದಂಪತಿ ಜೊತೆಗಿನ ತಮ್ಮ ಒಡನಾಟ, ಅವರ ಕನ್ನಡದ ಪ್ರೀತಿಯನ್ನು ನೆನಪಿಸಿಕೊಂಡು ಕಂಬನಿ ಮಿಡಿದಿದ್ದಾರೆ.

