ಕೈಕಂಬ: ಕಂದಾಯ ಇಲಾಖೆ ವತಿಯಿಂದ 94ಸಿಸಿ ಯೋಜನೆಯಡಿ ಗುರುಪುರ ಹೋಬಳಿಯ ಅರ್ಹ ಫಲಾನುಭವಿಗಳಿಗೆ ಉಚಿತ ಹಕ್ಕು ಪತ್ರ ವಿತರಣಾ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸಾಂಕೇತಿಕವಾಗಿ ಬುಧವಾರ ಕೈಕಂಬದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸರಕಾರ ಜಾಗದಲ್ಲಿ ಮಂಜೂರಾತಿ ಇಲ್ಲದೆ ಮನೆ ನಿರ್ಮಿಸಿದವರಿಗೆ ಹಕ್ಕು ಪತ್ರ ನೀಡಬೇಕೆನ್ನುವುದು ಸಿಎಂ ಸಿದ್ದರಾಮಯ್ಯನವರ ಕನಸಾಗಿದ್ದು, ಈ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಅರ್ಹ ಫಲಾನುಭವಿಗಳಿಗೆ ತಪ್ಪದೆ ಹಕ್ಕು ಪತ್ರ ನೀಡಬೇಕು ಎಂದು ಆದೇಶಿಸಲಾಗಿದೆ ಎಂದು ತಿಳಿಸಿದರು.
ಗುರುಪುರ ಹೋಬಳಿ ಭಾಗದಲ್ಲಿ ಹಕ್ಕು ಪತ್ರ ವಿತರಣೆ ಬಗ್ಗೆ ಪರಿಶೀಲನೆ ನಡೆಸಿ ಬಳಿಕ ಅರ್ಹ ಬಡವರ ಮನೆ ಮನೆಗೆ ಶಾಸಕ ಮೊಯಿದ್ದೀನ್ ಬಾವಾ ನೇತೃತ್ವದಲ್ಲಿ ಹಕ್ಕು ಪತ್ರ ವಿತರಿಸಲು ಮುಂದಾಗಬೇಕು ಎಂದು ಇದೇ ವೇಳೆ ತಹಶೀಲ್ದಾರಿಗೆ ಖಡಕ್ ಸೂಚನೆ ನಿಡಿದರು.
ಈ ವೇಳೆ ಸುಮಾರು 35 ಅರ್ಹ ಫಲಾನುಭವಿಗಳಿಗೆ ಸಚಿವ ಕಾಗೋಡು ತಿಮ್ಮಪ್ಪ ಉಚಿತ ಹಕ್ಕು ಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಮೊಯಿದ್ದೀನ್ ಬಾವಾ ಮಾತನಾಡಿದರು. ತಾ.ಪಂ. ಅಧ್ಯಕ್ಷ ಮೊಯಿದ್ದೀನ್ ಮೋನು, ತಾ.ಪಂ. ಉಪಾಧ್ಯಕ್ಷೆ ಗಣೇಶ್ ಪೂರ್ಣಿಮ, ಜಿ.ಪಂ.ಸದಸ್ಯ ಯು.ಪಿ.ಇಬ್ರಾಹೀಂ, ತಾ.ಪಂ.ಸದಸ್ಯರಾದ ಸುನೀಲ್, ಸಮದ್, ಶ್ರೀಧರ್, ಎಸಿ ಹಾಗೂ ತಹಶೀಲ್ದಾರ್ ಮತ್ತಿತರರು ಉಪಸ್ಥಿತರಿದ್ದರು.




