ಸುದ್ದಿ9 ಕೈಕಂಬ: ಇಂದು ಬೆಳ್ಳಗ್ಗೆ ಬಜ್ಪೆ ಠಾಣಾ ವ್ಯಾಪ್ತಿಯ ಗಂಜಿಮಠ ಮಳಲಿ ಕ್ರಾಸ್ ಬಳಿ ಸಂಭವಿಸಿದ ಕಾರ್ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಅಪಘಾತಕ್ಕೆ ಬೈಕ್ನಲ್ಲಿದ್ದ ಇಬ್ಬರು ಸವಾರರು ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಬೆಳಿಗ್ಗೆ ಗಂಜಿಮಠದಿಂದ ಮಂಗಳೂರಿತ್ತ ಪ್ರಯಾಣಿಸುತ್ತಿದ್ದ ರಿಟ್ಜ್ ಕಾರ್ ಹಾಗೂ ಅದೇ ದಿಕ್ಕಿನಿಂದ ಹೋಗುತ್ತಿದ್ದ ಬೈಕ್ ಮಧ್ಯೆ ಅಪಘಾತ ಸಂಭವಿಸಿತು ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಕಾರ್ ಪೊದೆಯತ್ತ ಸರಿದು ನಿಂತರೆ, ಬೈಕ್ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
ಬೈಕ್ ಪೊಲೀಸ್ ಸಿಬ್ಬಂದಿಗೆ ಸಬ್ಬಂಧಿಸಿರಬಹುದೆಂದು ಹೇಳಲಾಗಿದ್ದು, ಬೈಕ್ನ ಹಿಂಬದಿ `ಪೊಲೀಸ್’ ಎಂದು ಬರೆಯಲಾಗಿದೆ. ಅಲ್ಲದೆ ಬೈಕ್ನಲ್ಲಿ ಇನ್ನೊಬ್ಬರು ಮಹಿಳೆ ಎಂದು ತಿಳಿದುಬಂದಿದ್ದು, ಮಹಿಳೆಯ ಸೀರೆ ಬೈಕ್ ನಲ್ಲೇ ಉಳಿದುಕೊಂಡಿದ್ದು, ಅದರ ಮೇಲೆ ಹೆಲ್ಮೆಟ್ ಬಿದ್ದಿತ್ತು, ಈ ಪೈಕಿ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಸಾರ್ವಜನಿಕರು ಜಮಾಯಿಸಿದ್ದು, ತಕ್ಷಣ ಆಸ್ಪತ್ರೆಗೆ ಸೇರಿಸುವಲ್ಲಿ ಸಹಕರಿಸಿದ್ದಾರೆ. ಬಜ್ಪೆ ಠಾಣಾ ಪೊಲೀಸರು ಘನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೈಕ್ನಲ್ಲಿದ್ದ ಕೀಯಲ್ಲಿ ನಂಬರ್ ಕಂಡುಬಂದಿದ್ದು, ಇದನ್ನು ಪರಿಶೀಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಗಾಯಾಳುಗಳ ಬಗ್ಗೆ ನಿಖರ ಮಾಹಿತಿ ಇದುವರೆಗೂ ತಿಳಿದುಬಂದಿಲ್ಲ, ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

