ಬೆಂಗಳೂರು: 2018ನೇ ಸಾಲಿನಲ್ಲಿ ಕೇಂದ್ರ ಮಂಡಿಸಿರುವ ಬಜೆಟ್ ರಾಜ್ಯದ ಜನತೆಗೆ ತೀವ್ರ ನಿರಾಶೆ ಮೂಡಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಶುಕ್ರವಾರ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2018ನೇ ಸಾಲಿನಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಯಾವುದೇ ದೂರದೃಷ್ಟಿ ಇಲ್ಲ. ಕೇಂದ್ರ ಬಜೆಟ್ ಬಗ್ಗೆ ನಾವು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ರೈತರ ಸಾಲ ಮನ್ನಾ ಸೇರಿದಂತೆ ರಾಜ್ಯಕ್ಕೆ ಯಾವುದೇ ವಿಶೇಷವಾದ ಯೋಜನೆ ಘೋಷಿಸಿಲ್ಲ. ಕೇವಲ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ ಎಂದು ದೂರಿದರು.
ಬಿಜೆಪಿಗರು ಬರೀ ಮಾತನಾಡುತ್ತಾರೆ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇವೆ ಎನ್ನುತ್ತಿದ್ದಾರೆ. ಆದರೆ ಕನಿಷ್ಠ ಬೆಂಬಲ ಬೆಲೆಗಾಗಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.

