ಬೆಂಗಳೂರು: ಬಿಜೆಪಿ ಕಾರ್ಯಕರ್ತ ಎನ್ನಲಾದ ಸಂತೋಷ್ ಎಂಬ ಯುವಕನ ಹತ್ಯೆ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದು ಪ್ರಕರಣಕ್ಕೆ ಹೊಸ ತಿರುವು ಬಂದಿದೆ.
ಬೇಕರಿ ಬಳಿ ಗಾಂಜಾ ಸೇವನೆ ಮಾಡೋದು ಬೇಡ, ಮೈದಾನದಲ್ಲಿ ಹೋಗಿ ಸೇದಿ ಎಂದು ಸಂತೋಷ್ ಹೇಳಿದ ಬುದ್ಧಿಮಾತು ಜಗಳಕ್ಕೆ ತಿರುಗಿ ಕೊಲೆ ನಡೆದಿದೆ ಎಂಬುದು ಪೊಲೀಸ್ ವಿಚಾರಣೆ ವೇಳೆ ಬಯಲಾಗಿದೆ.
ಸಂತೋಷ್ ಸ್ನೇಹಿತ ಅಶೋಕ್ ನೀಡಿರುವ ದೂರಿನ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ವಾಸಿಮ್, ಉಮರ್, ಇರ್ಫಾನ್ ಮತ್ತು ಫಿಲಿಪ್ಸ್ ಎಂಬ ನಾಲ್ವರನ್ನು ಬಂಧಿಸಿದ್ದಾರೆ.
ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಜನವರಿ 30 ರಂದು ಸಂತೋಷ್ ಹುಟ್ಟಿದ ದಿನವಾಗಿತ್ತು. ಜ. 31ರಂದು ಸಂಜೆ ತನ್ನ ಗೆಳೆಯರಾದ ಅಶೋಕ್, ರಾಜೇಶ್, ರವಿಚಂದ್ರ ಮತ್ತು ಇತರರೊಂದಿಗೆ ಸಂತೋಷ್ ಪಾರ್ಟಿ ಮಾಡಿದ್ದರು. ಪಾರ್ಟಿ ಮುಗಿಸಿ ಚಿನ್ನಪ್ಪ ಗಾರ್ಡನ್ 2 ನೇ ಕ್ರಾಸ್ನ ಬೇಕರಿ ಬಳಿ ಸಂತೋಷ್ ಮತ್ತು ಆತನ ಸ್ನೇಹಿತರು ಹೋಗಿದ್ದರು. ಈ ವೇಳೆ ಬೇಕರಿ ಬಳಿ ವಸೀಂ ಮತ್ತು ಆತನ ಸಹಚರರು ಗಾಂಜಾ ಸೇವನೆ ಮಾಡುತ್ತ ಕುಳಿತಿದ್ದರು. ಈ ವೇಳೆ ವಸೀಂ ಮತ್ತು ಉಮರ್ ಇಬ್ಬರೂ ಸಂತೋಷ್ ಬಳಿ ಜಗಳ ಶುರು ಮಾಡಿದ್ದಾರೆ.
ಅರೋಪಿ ಉಮರ್ ಸಂತೋಷ್ ಸ್ನೇಹಿತ ರಾಜೇಶ್ನ ಬಟ್ಟೆ ಹರಿದು ಗಲಾಟೆ ಮಾಡಿದ್ದ. ಜಗಳ ತಾರಕಕ್ಕೇರಿದಾಗ ವಸೀಂ ತನ್ನ ಬಳಿಯಿದ್ದ ಚಾಕುವಿನಿಂದ ಸಂತೋಷ್ ತಲೆ ಮತ್ತು ತೊಡೆಗೆ ಇರಿದು ಬಿಟ್ಟಿದ್ದಾನೆ. ನಂತರ ವಸೀಂ ಮತ್ತು ಆತನ ಮೂವರು ಸ್ನೇಹಿತರು ಆಟೋದಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮಾಹಿತಿಯಿಂದ ಬಹಿರಂಗವಾಗಿದೆ.
ಕುಸಿದು ಬಿದ್ದ ಸಂತೋಷ್ನನ್ನು ಹತ್ತಿರದ ಡಿವೈನ್ ಅಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರ ಮಾಹಿತಿ ಮೇರೆಗ ಜೈನ್ ಅಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಸಂತೋಷ್ ಮೃತಪಟ್ಟಿದ್ದನು.

