ಹಾಸನ: ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿ ದೇಶದಲ್ಲಿ ಹತ್ತು ಹಲವು ಕಾನೂನುಗಳ ಜಾರಿಯಾಗಿದ್ದರೂ ಅರಿವಿನ ಕೊರತೆಯಿಂದ ಗ್ರಾಹಕರ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ಅಧ್ಯಕ್ಷ ನ್ಯಾಯಾಧೀಶ ಎ.ಲೋಕೇಶ್ ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.
ನಗರದ ಬಿಳಿಯಮ್ಮ ಈರೇಗೌಡ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಹಯೋಗದೊಂದಿಗೆ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಣ ಕೊಟ್ಟು ಪಡೆಯುವ ಯಾವುದೇ ಸರಕು ಮತ್ತು ಸೇವೆಯಿಂದ ನಷ್ಟ ಅನುಭವಿಸುವ ಗ್ರಾಹಕರಿಗೆ ಪರಿಹಾರ ಒದಗಿಸಿಕೊಡಲು ಜಿಲ್ಲಾ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಕೆಲಸ ಮಾಡುತ್ತಿದೆ. 20 ಲಕ್ಷ ರೂ.ಗಳವರೆಗಿನ ನಷ್ಟಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಯಲ್ಲಿ, ಒಂದು ಕೋಟಿ ರೂ. ವರೆಗಿನ ಪರಿಹಾರಕ್ಕೆ ರಾಜ್ಯ ಮಟ್ಟದ ವೇದಿಕೆಯಲ್ಲಿ ಮತ್ತು ಒಂದು ಕೋಟಿ ರೂ.ಗಿಂತ ಹೆಚ್ಚಿನ ಪರಿಹಾರಕ್ಕೆ ರಾಷ್ಟ್ರ ಮಟ್ಟದ ವೇದಿಕೆಯಲ್ಲಿ ದಾವೆ ಹೂಡಬಹುದಾಗಿದೆ ಎಂದ ಅವರು, ಹಾಸನ ಜಿಲ್ಲೆಯಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಮೆರಿಕದಂತಹ ಮುಂದುವರಿದ ದೇಶಗಳಲ್ಲಿ ಗ್ರಾಹಕರ ವ್ಯಾಜ್ಯ ಪರಿಹಾರ ನ್ಯಾಯಾಲಯಗಳು ಮೊದಲ ಸ್ಥಾನದಲ್ಲಿದ್ದರೆ, ಭಾರತದಲ್ಲಿ ಸಿವಿಲ್ ನ್ಯಾಯಾಲಯಗಳು ಮುಂಚೂಣಿಯಲ್ಲಿವೆ. ಗ್ರಾಹಕರಲ್ಲಿ ಅರಿವಿನ ಕೊರತೆ ಇರುವುದೇ ಇದಕ್ಕೆ ಕಾರಣ. ವಿದ್ಯಾರ್ಥಿಗಳು ಗ್ರಾಹಕರ ಸಂರಕ್ಷಣೆ ಕಾಯ್ದೆಗಳು ಮತ್ತು ಹಕ್ಕುಗಳ ಬಗ್ಗೆ ತಿಳಿವಳಿಕೆ ಪಡೆದು ತಮ್ಮ ಪೋಷಕರು ಮತ್ತು ನೆರೆಹೊರೆಯವರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಶಿವಮೊಗ್ಗ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಚಾಲಕ ಎಂ.ಎಂ. ಜಯಸ್ವಾಮಿ ಮಾತನಾಡಿ, ಭಾರತದ ಜನಸಂಖ್ಯೆಯಲ್ಲಿ ಶೇ. 70 ರಷ್ಟು ಯುವಜನರಿದ್ದಾರೆ. ಹಾಗಾಗಿ ಯುವಜನರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಕಂಪನಿಗಳು ಆಕರ್ಷಕ ಜಾಹೀರಾತುಗಳನ್ನು ರೂಪಿಸುತ್ತಿವೆ. ಇಂತಹ ಜಾಹೀರಾತುಗಳ ಮೋಡಿಗೆ ಒಳಗಾಗದೆ ಗ್ರಾಹಕರ ಹಕ್ಕುಗಳ ಅರಿವು ಪಡೆದು ಉತ್ತಮ ಸರಕು ಮತ್ತು ಸೇವೆ ಪಡೆಯಬೇಕು. ಆನ್‍ಲೈನ್ ವ್ಯವಹಾರ ನಡೆಸುವಾಗ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಈ ವೇಳೆ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎ.ಎ. ಫಜಲ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಎನ್.ಎಸ್. ಶ್ರೀಕಂಠಮೂರ್ತಿ, ಬಿಈಜಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಬಿ.ಈ. ಜಗದೀಶ್, ಸಂಜೆ ಕಾಲೇಜು ಪ್ರಾಂಶುಪಾಲರಾದ ಎಚ್.ಎ. ರೇಖಾ, ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ಸದಸ್ಯೆ ಬಿ.ಕೆ. ಶಾಂತಲಾ, ಸಿದ್ದಯ್ಯ ಮತ್ತಿತರರು ಉಪಸ್ಥಿತರಿದ್ದರು. ಆಹಾರ ನಿರೀಕ್ಷೆಕ ಎಸ್.ಆರ್. ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷ ಬೋರೇಗೌಡ ವಂದಿಸಿದರು

