ಬೆಂಗಳೂರು: ಫೆ.4ರಂದು ಪ್ರಧಾನಿ ಮೋದಿ ನಗರಕ್ಕೆ ಆಗಮಿಸಲಿದ್ದು, ಅಂದು ಬಂದ್ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ ಎಂದು ಗೃಹ ಸಚಿವ ರಾಮಲಿಂಗ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಯಾವುದೇ ರೀತಿಯ ಬಂದ್ ಗೆ ರಾಜ್ಯ ಸರ್ಕಾರ ಅವಕಾಶ ನೀಡಬಾರದು. ನಾವು ಅದನ್ನು ಪಾಲಿಸುತ್ತೇವೆ. ಪ್ರತಿಭಟನೆ ನಡೆಸುವುದಕ್ಕೆ ಎಲ್ಲರಿಗೂ ಅವಕಾಶವಿದ್ದು, ಸ್ವಾತಂತ್ರ್ಯ ಉದ್ಯಾನದಲ್ಲಿ ಯಾರೂ ಬೇಕಾದರೂ ಪ್ರತಿಭಟನೆ ನಡೆಸಬಹದು ಎಂದರು.
ಇನ್ನು ಶಾಸಕ ಸಿ.ಟಿ.ರವಿ ಅವರಿಗೆ ದುಷ್ಕರ್ಮಿಗಳು ಬೆದರಿಕೆ ಹಾಕಿರುವ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ. ಅವರಿಗೆ ಇನ್ನಷ್ಟು ಭದ್ರತೆ ನೀಡುತ್ತೇವೆ ಎಂದು ತಿಳಿಸಿದರು.

