ಬಂಟ್ವಾಳ: ತಾಲ್ಲೂಕಿನ ಪುರಾಣ ಪ್ರಸಿದ್ಧ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಇದೇ 28ರಂದು ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ನಡುಬಲಿ ಉತ್ಸವ ಹಾಗೂ ಇಲ್ಲಿನ ಮಾವಂತೂರು ರವಿಶಂಕರ ಶೆಟ್ಟಿ ಇವರಿಂದ ನೂತನ ರಥ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಇದೇ 29ರಂದು ದೇವರ ಮಹಾ ರಥೋತ್ಸವ ನಡೆಯಲಿದೆ.
ಇಂದು ಸಂಜೆ ಗಂಟೆ 5.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರ ಎ.ರಾಜೇಂದ್ರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎನ್.ಎಂ.ಅಡ್ಯಂತಾಯ, ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಮೂಡುಬಿದ್ರೆ ಚೌಟರ ಅರಮನೆ ಕುಲದೀಪ್ ಎಂ., ಅಮ್ಟಾಡಿ ಮಂಗ್ಲಿಮಾರ್ ಶ್ರೀ ಅಣ್ಣಪ್ಪ ಕಲಾಯಿ ಮಹಮ್ಮಾಯಿ ದೇವಿ ಮತ್ತು ಪರಿವಾರ ದೈವಗಳ ಕ್ಷೇತ್ರದ ಆಡಳಿತ ಮೊಕ್ತೇಸರ ರವಿಶಂಕರ ಶೆಟ್ಟಿ ಬಡಾಜೆಗುತ್ತು ಮತ್ತಿತರ ಗಣ್ಯರು ಭಾಗವಹಿಸುವರು.

ಸುಮಾರು 800 ವರ್ಷಗಳ ಹಿನ್ನೆಲೆ ಮತ್ತು ವೇಣೂರಿನ ಅಜಿಲ ವಂಶಸ್ಥರ ಕೊಡುಗೆ ಎಂಬ ಪ್ರತೀತಿ ಹೊಂದಿದೆ. ಈ ಕ್ಷೇತ್ರವು ಜಿಲ್ಲೆಯಲ್ಲೇ ಬೃಹತ್ ಗಾತ್ರದ ದಾರು (ಮರದ) ವಿಗ್ರಹ ಹೊಂದಿರುವ ವಿಶಿಷ್ಟ ದೇವಾಲಯ ಎಂದು ಗುರುತಿಸಿಕೊಂಡಿದ್ದು, ಅರಳ ಮತ್ತು ಕೊಯಿಲ ಎರಡು ಗ್ರಾಮಗಳ ಜನರ ಗ್ರಾಮದೇವತೆಯ ಆರಾಧ್ಯಕೇಂದ್ರವಾಗಿದೆ. ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೊರ್ನಾಡು -ಎಡಪದವು ರಸ್ತೆಯಲ್ಲಿ 2 ಕಿ.ಮೀ. ಕ್ರಮಿಸಿದಾಗ ಸಿಗುವ ಈ ಕ್ಷೇತ್ರವು ದಕ್ಷಿಣ ಭಾರತದಲ್ಲೇ ಏಕೈಕ ಗರುಡ ಮಹಾಕಾಳಿ ದೇವಸ್ಥಾನ ಎಮದು ಗುರುತಿಸಿಕೊಂಡಿದೆ.
ಪುರಾಣದ ಉಲ್ಲೇಖದಂತೆ ರಕ್ತ ಬೀಜಾಸುರನ ರಕ್ತವು ಭೂಮಿ ಸ್ಪರ್ಷಿಸಿದಾಗ ಸಹಸ್ರಾರು ಅಸುರರು ಹುಟ್ಟಿ ಬರುತ್ತಿದ್ದ ವೇಳೆ ಶ್ರೀ ದೇವಿಯ ಅಪ್ಪಣೆಯಂತೆ ಉಗ್ರ ಸ್ವರೂಪಿಣಿಯಾದ ಮಹಾಕಾಳಿ ಅವತಾರ ತಾಳಿ ನೀಳವಾದ ನಾಲಿಗೆ ಹೊರಚಾಚಿ ರಕ್ತಹೀರಿ ರಾಕ್ಷಸರನ್ನು ಸಂಹರಿಸಿದಳು ಎಂಬ ಪ್ರತೀತಿ ಇದೆ. ಇದೇ ವೇಳೆ ಮಹಾಕಾಳಿಯು ಭಕ್ತಜನರ ಇಷ್ಟಾರ್ಥಗಳನ್ನು ಈಡೇರಿಸಲು ತನ್ನ ವಾಹನ ಗರುಡನ ಮೇಲೇರಿ ವಿಹರಿಸುತ್ತಿದ್ದಾಗ ವಿಶ್ರಾಂತಿಗಾಗಿ ಬೆಟ್ಟ-ಗುಡ್ಡಗಳಿಂದ ಕೂಡಿದ ಪ್ರಕೃತಿ ಸೌಂದರ್ಯದ ‘ಅರಳ’ದಲ್ಲಿ ಇಳಿದು ತೂಗುಯ್ಯಾಲೆಯಲ್ಲಿ ಪವಡಿಸಿ ಬಳಿಕ ಇಲ್ಲೇ ನೆಲೆಯಾದಳು ಎಂಬ ನಂಬಿಕೆ ಭಕ್ತರಲ್ಲಿದೆ.
ಕ್ಷೇತ್ರದ ತಂತ್ರಿ ಉದಯ ಪಾಂಗಾಣ್ಣಾಯ ಇವರ ಮಾರ್ಗದರ್ಶನದಲ್ಲಿ, ಪ್ರಧಾನ ಅರ್ಚಕ ಎ.ರಾಜ ಭಟ್, ಅರ್ಚಕ ಹರೀಶ ಭಟ್ ಸಹಿತ ಆಡಳಿತ ಮೊಕ್ತೇಸರ ಎ.ರಾಜೇಂದ್ರ ಶೆಟ್ಟಿ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್.ಎಂ.ಅಡ್ಯಂತಾಯ ಇವರ ನೇತೃತ್ವದಲ್ಲಿ ಅರಳ-ಕೊಯಿಲ ಗ್ರಾಮಸ್ಥರು ವಾರ್ಷಿಕ ಜಾತ್ರೆ ಮತ್ತು ರಥೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಅವಿರತ ಶ್ರಮಿಸುತ್ತಿದ್ದಾರೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಗ್ಗೊಂಡೆ ಜಗದೀಶ ಆಳ್ವ ತಿಳಿಸಿದ್ದಾರೆ.
