ಮುಂಬೈ: ಕುರಕಲು ತಿಂಡಿ ತಯಾರಿಕೆ ಮತ್ತು ಮಾರಾಟ ಮಳಿಗೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ 12 ಕಾರ್ಮಿಕರು ಮೃತಪಟ್ಟಿರುವ ಘಟನೆ ಇಲ್ಲಿನ ಸಾಕೀನಾಕಾ–ಕುರ್ಲಾ ಪ್ರದೇಶದಲ್ಲಿ ನಡೆದಿದೆ.
ಮಂಗಳವಾರ ಬೆಳಗಿನ ಜಾವ ಸುಮಾರು 4.25ಕ್ಕೆ ಸಂಭವಿಸಿದ ಸ್ಫೋಟಕ್ಕೆ ಕಟ್ಟಡ ಕುಸಿದಿದ್ದು, ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ 12 ಮಂದಿ ಹೊಗೆ ಮತ್ತು ಶಾಖದಿಂದ ಮೃತಪಟ್ಟಿದ್ದಾರೆಂದು ಮುಂಬೈ ಮಹಾನಗರಪಾಲಿಕೆ ವಿಪತ್ತು ನಿರ್ವಹಣಾ ಘಟಕ ಮಾಹಿತಿ ನೀಡಿದೆ.
ಸುದ್ದಿ ತಿಳಿದ ಮೂರು ಅಗ್ನಿಶಾಮಕ ವಾಹನ, ನಾಲ್ಕು ನೀರಿನ ಟ್ಯಾಂಕರ್, ಆ್ಯಂಬುಲೆನ್ಸ್‌ಗಳು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ. ಇನ್ನೂ ಈ ದುರಂತಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಂಧ ಮಹಿಳೆಯ ಸಮಯ ಪ್ರಜ್ಞೆ: ಸ್ಫೋಟ ಸಂಭವಿಸಿದ ಮಳಿಗೆಯ ಮುಂಭಾಗದ ಚಿಕ್ಕ ಕೋಣೆಯಲ್ಲಿ ವಾಸವಿರುವ ಅಂಧ ಮಹಿಳೆಯೊಬ್ಬರ ಸಮಯ ಪ್ರಜ್ಞೆಯಿಂದ ಹಲವರನ್ನು ರಕ್ಷಣೆ ಮಾಡಲಾಗಿದೆ.
