ಬಜ್ಪೆ : ಗ್ರಾಮೀಣ ಪ್ರದೇಶದ ಈ ಕಾಲೇಜಿನ ಸಾಧನೆ ಅಭಿನಂದನೀಯ. ಕ್ರೀಡಾ ಕ್ಷೇತ್ರದಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟ ಪ್ರವೇಶಿಸಿದ್ದಾರೆಂಬುದು ಹೆಮ್ಮೆಯ ಸಂಗತಿ. ಹುಟ್ಟುವಾಗಲೇ ಎಲ್ಲರಲ್ಲೂ ಒಂದಿಲ್ಲ ಒಂದು ಪ್ರತಿಭೆ ಇರುತ್ತದೆ. ಅದನ್ನು ಪೋಷಕರು ಮತ್ತು ಶಿಕ್ಷಕರು ಗುರುತಿಸಿ, ಮಕ್ಕಳನ್ನು ಮುನ್ನಡೆಸಿದಾಗ ಮುಂದೊಂದು ದಿನ ಅವರಿಂದ ದೊಡ್ಡ ಸಾಧನೆ ನಿರೀಕ್ಷಿಸಲು ಸಾಧ್ಯವಿದೆ ಎಂದು ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಎಜ್ಯುಕೇಶನ್ ಟ್ರಸ್ಟಿನ ಆಡಳಿತ ಟ್ರಸ್ಟಿ ನವೀನ್ಚಂದ್ರ ಡಿ ಸುವರ್ಣ ಅಭಿಪ್ರಾಯಪಟ್ಟರು.

ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ತಮ್ಮ ಮಕ್ಕಳು ಮುಂದೆ ಡಾಕ್ಟರ್, ಇಂಜಿನಿಯರ್ ಆಗಿಬೇಕೆಂದು ಪೋಷಕರು ಆಶಿಸುತ್ತಾರೆ. ಇದು ತಪ್ಪಲ್ಲ. ಆದರೆ ಶಿಕ್ಷಣದೊಂದಿಗೆ ಕ್ರೀಡೆಯಲ್ಲೂ ಮಕ್ಕಳು ಮುಂದೆ ಬರಲು ಸಾಧ್ಯವಿದೆ ಎಂಬುದನ್ನು ಎಲ್ಲ ಪಾಲಕರು ತಿಳಿದುಕೊಳ್ಳಬೇಕು ಮತ್ತು ಅವರ ಕ್ರೀಡಾ ಆಸಕ್ತಿಗೆ ಉತ್ತೇಜನ ನೀಡಬೇಕು ಎಂದರು.
“ಸಮಾಜದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ನಮಗೆ ಇಲ್ಲಿ ಸಿಗುವ ಉತ್ತಮ ಅಂಶಗಳನ್ನು ಜೀವನದಲ್ಲಿ ಅವಡಿಸಿಕೊಳ್ಳಬೇಕು. ಶಿಕ್ಷಣ ಪದ್ಧತಿ ಬದಲಾಗಬೇಕು” ಎಂದ ಮುಖ್ಯ ಅತಿಥಿ, ವಿಜಯವಾಣಿ ಪತ್ರಿಕೆಯ ಉಪ-ಸಂಪಾದಕ ಮೋಹನದಾಸ ಮರಕಡ, “ದೇಶ ಕಾಯುವ ಸೇನೆಯಲ್ಲೂ ನಮ್ಮ ಮಕ್ಕಳು ಕಾಣಿಸಿಕೊಳ್ಳುವಂತಾಗಬೇಕು. ಗಡಿಯಲ್ಲಿ ಕಾಯುವ ನಮ್ಮ ಸೈನಿಕರ ಕಾರಣದಿಂದ ನಾವಿಂದು ನೆಮ್ಮದಿಯ ಜೀವನ ಸಾಗಿಸುವಂತಾಗಿದೆ. ಅವರೇನಾದರೂ ಪ್ರತಿಭಟಿಸಿದರೆ ನಮ್ಮ ನೆಮ್ಮದಿ ಭಂಗವಾಗಲಿದೆ” ಎಂದರು.
ಇಂದು ನಮ್ಮ ವಿದ್ಯಾರ್ಥಿಗಳಲ್ಲಿ ಲೈಬ್ರೆರಿ ಸಂಸ್ಕøತಿ ಮಾಯವಾಗಿದೆ ಮತ್ತು ಮಕ್ಕಳು ಮೊಬೈಲ್ ಸಂಸ್ಕøತಿಗೆ ಆಕರ್ಷಿತರಾಗಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಆಧುನಿಕ ತಂತ್ರಜ್ಞಾನ ಉತ್ತಮವಲ್ಲ. ಪತ್ರಿಕೆ ಓದುವ ಸಂಸ್ಕøತಿಯೂ ಮಾಯವಾಗುತ್ತಿದೆ. ಈ ದೇಶ ಶತಮಾನಗಳಿಂದಲೂ ಜಗತ್ತಿಗೆ ಜ್ಞಾನದ ಬೆಳಕು ನೀಡುತ್ತಿದೆ. ಭಾರತ ಯಾವತ್ತೂ ಜಗತ್ತಿಗೆ ಮಾಫಿಯಾ, ಡಾನ್, ಭಯೋತ್ಪಾದಕರನ್ನು ನೀಡಿಲ್ಲ ಎಂದವರು ಮಾರ್ಮಿಕವಾಗಿ ನುಡಿದರು.
ಕಾಲೇಜು ಪ್ರಾಂಶುಪಾಲೆ ಅಹಲ್ಯಾ ಕೆ ವರದಿ ವಾಚಿಸಿದರು. ಇತಿಹಾಸ ಉಪನ್ಯಾಸಕ ಸುಧಾಕರ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧನಂಜಯ ಹೆಗ್ಡೆ ಹಾಗೂ ವಿದ್ಯಾರ್ಥಿ ಮುಖಂಡರು ಉಪಸ್ಥಿತರಿದ್ದರು. ಸಮಾಜಶಾಸ್ತ್ರ ಉಪನ್ಯಾಸಕಿ ಮಾಲತಿ ಮತ್ತು ರಾಜಕೀಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಕವಿತಾ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಬಹುಮಾನ ಪಟ್ಟಿ ವಾಚಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಸುಧೀರ್ ವಂದನಾರ್ಪಣೆಗೈದರು.
ಪುಷ್ಪಾವತಿ ಕಾಲೇಜಿನ `ವರ್ಷದ ಕ್ರೀಡಾಪಟು’ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ದೇಶ-ವಿದೇಶಗಳ ನೋಟುಗಳ ಪ್ರದರ್ಶನ ನಡೆಯಿತು ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.
