ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಭವ್ಯ ಸ್ವಾಗತ
ಬಜ್ಪೆ : ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಟೆನ್ನಿಸ್ ವಾಲಿಬಾಲ್ ಸ್ಪರ್ಧೆಯಲ್ಲಿ ಇಲ್ಲಿನ ಸುಂಕದಕಟ್ಟೆ ಶ್ರೀ ಸ್ವಾಮಿ ನಿರಂಜನ ಸ್ವಾಮಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಎರಡು ತಂಡಗಳು ಪ್ರಥಮ ಸ್ಥಾನ ಪಡೆದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿವೆ. ರಾಷ್ಟ್ರ ಮಟ್ಟದ ಸ್ಪರ್ಧೆ ಇನ್ನಷ್ಟೇ ನಿಗದಿಯಾಗಬೇಕಿದೆ ಎಂದು ಕಾಲೇಜಿನ ಅಧಿಕೃತ ಮೂಲ ತಿಳಿಸಿದೆ.
ಡಿ. 13ರಂದು ವಿದ್ಯಾರ್ಥಿಗಳ ವಿಜೇತ ತಂಡ ಸುಂಕದಕಟ್ಟೆಗೆ ಆಗಮಿಸುತ್ತಲೇ ಕಾಲೇಜು ವತಿಯಿಂದ ಭವ್ಯ ಸ್ವಾಗತ ಕೋರಲಾಯಿತು. ವಿಜೇತ ಕ್ರೀಡಾಳುಗಳು ಮತ್ತು ಈ ತಂಡವನ್ನು ಅಣಿಗೊಳಿಸಿದ ಕಾಲೇಜಿನ ದೈಹಿಕ ಶಿಕ್ಷಕ ನವೀನ್ ಕುತ್ತಾರ್ ಅವರನ್ನು ಸುಂಕದಕಟ್ಟೆಯ ಕಾಲೇಜು ಆಸುಪಾಸಿನಲ್ಲಿ ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಲಾಯಿತು.
ಈ ಸಂಭ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡರು.


