ಕೈಕಂಬ: : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಪ್ರಯುಕ್ತ ದೇವಳದ ಪ್ರಮುಖರು ಸೇರಿದಂತೆ ಗಣ್ಯರ ಸಮಾಲೋಚನಾ ಸಭೆ ನಗರದ ಪತ್ತುಮುಡಿ ಸೌಧದಲ್ಲಿ ಭಾನುವಾರ ನಡೆಯಿತು.

ಪೊಳಲಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರೂ ಆಗಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿ, 1700 ವರ್ಷಗಳ ಇತಿಹಾಸ ಪ್ರಸಿದ್ಧ ದೇವಸ್ಥಾನದ ಜೀರ್ಣೋದ್ದಾರ ಮಾಡುವ ಅವಕಾಶ ನಮಗೆ ಸಿಕ್ಕಿರುವುದು ಪುಣ್ಯದ ಕೆಲಸ. 4.5 ಕೋಟಿ ರೂ. ವೆಚ್ಚದ ಶಿಲಾಮಯ ಗರ್ಭಗುಡಿ ನಿರ್ಮಾಣ, 5.5 ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ ಸುತ್ತುಪೌಳಿ, 50 ಲಕ್ಷ ರೂ. ವೆಚ್ಚದಲ್ಲಿ ಹೊಸ ಧ್ವಜಸ್ತಂಭ ಪ್ರತಿಷ್ಠಾಪನೆ, ಒಂದು ಕೋಟಿ ರೂ. ವೆಚ್ಚದಲ್ಲಿ ಶ್ರೀ ದುರ್ಗಾಪರಮೇಶ್ವರಿ ಗುಡಿ ಶಿಲಾಮಯ ನಿರ್ಮಾಣ ಹಾಗೂ ನವೀಕರಣ ಮತ್ತಿತರ ಕಾರ್ಯ ನಡೆಯುತ್ತಿದೆ ಎಂದರು.
ಜೀರ್ಣೋದ್ದಾರದ ಮಂಗಳೂರು ಸಮಿತಿಗೆ ನಿಟ್ಟೆಗುತ್ತು ಯತಿರಾಜ ಶೆಟ್ಟಿ ಅವರ ಹೆಸರನ್ನು ಘೋಷಿಸಿದ ಸಚಿವ ರೈ, ಸರಕಾರದಿಂದ ಅಗತ್ಯ ನೆರವು ನೀಡಲಾಗುವುದು. ಎಲ್ಲರೂ ತನು ಮನ ಧನಗಳಿಂದ ಸಹಕರಿಸಿ, ಶ್ರೀ ಪೊಳಲಿ ರಾಜರಾಜೇಶ್ವರಿ ಮಹಾತಾಯಿಯ ಅನುಗ್ರಹಕ್ಕೆ ಪಾತ್ರರಾಗುವಂತೆ ಸಚಿವರು ವಿನಂತಿಸಿದರು.
ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ರಘುನಾಥ ಸೋಮಯಾಜಿ, ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಮಾತನಾಡಿ, ದೇವಳದ ಪುನರ್ ನೀರ್ಮಾಣ, ಜೀರ್ಣೋದ್ದಾರ ಸಮಿತಿ ಹಾಗೂ ಆಡಳಿತ ಮಂಡಳಿ ಜತೆ ಕಾಯಾ ವಾಚಾ ಮನಸಾ ಸಹಕಾರ ನೀಡಲು ಕೋರಿದರು. ದೇವಸ್ಥಾನದ ಜೀಣೋದ್ದಾರ ಸಮಿತಿ ಸದಸ್ಯ ಸುಬ್ರಾಯ ಕಾರಂತ್ ಸ್ವಾಗತಿದರು. ಪ್ರಧಾನ ಕಾರ್ಯದರ್ಶಿ ಉಳಿಪಾಡಿಗುತ್ತು ಯು. ತಾರನಾಥ ಆಳ್ವ ಪ್ರಾಸ್ತಾವಿಕ ಮಾತನಾಡಿದರು. ಡಾ. ಆಶಾಜ್ಯೋತಿ ರೈ ಮಾಲಾಡಿ ಕಾರ್ಯಕ್ರಮ ನಿರುಪಿಸಿದರು.

