ಬಂಟ್ವಾಳ: ಪ್ರಸಕ್ತ ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ಮತ್ತು ಅರ್ಥಪೂರ್ಣ ಭಾಷೆಯಾಗಿ ರೂಪುಗೊಂಡ ತುಳು ಭಾಷೆಗೆ ಸಂಬಂಧಿಸಿದಂತೆ ಭಾಷಾ ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತುಳುನಾಡಿನ ಲೇಖಕರು ಮತ್ತು ಜಾನಪದ ಕಲಾವಿದರಿಗೆ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಲು ತುಳು ಸಾಹಿತ್ಯ ಸಮ್ಮೇಳನ ಅಗತ್ಯವಾಗಿದೆ ಎಂದು ಹಾವೇರಿ ಜಾನಪದ ವಿಶ್ವವಿದ್ಯಾಲಯ ವಿಶ್ರಾಂತ ಉಪಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಹೇಳಿದ್ದಾರೆ.
ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಭಾನುವಾರ ನಡೆದ ತಾಲ್ಲೂಕು ಮಟ್ಟದ ಪ್ರಥಮ ತುಳು ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ತುಳು ಭಾಷೆಯು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ತುಳುನಾಡಿನ ಎಲ್ಲಾ ವರ್ಗದ ಜನತೆ ಸಹಿತ ರಾಜಕಾರಣಿಗಳು ಸಂಘಟಿತರಾಗಿ ಶ್ರಮಿಸಬೇಕು ಎಂದರು. ಪ್ರತೀ ತಾಲ್ಲೂಕು ಮಟ್ಟದಿಂದ ಜಿಲ್ಲೆ ಮತ್ತು ದೇಶ ಹಾಗೂ ಜಾಗತಿಕ ಮಟ್ಟವಾಗಿ ತುಳು ಸಾಹಿತ್ಯ ಸಮ್ಮೇಳನ ನಡೆದಾಗ ತುಳು ಭಾಷೆ ಎಂಬ ಕಟ್ಟಡದ ಪಂಚಾಂಗ ಬಲಿಷ್ಠವಾಗುತ್ತದೆ ಎಂದರು. ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ, ಪತ್ರಕರ್ತ ಮಲಾರು ಜಯರಾಮ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗರಿಷ್ಟ ಮಂದಿ ಮಾತನಾಡುವುದರ ಜೊತೆಗೆ ವಿಶಿಷ್ಟ ಲಿಪಿ ಹೊಂದಿರುವ ತುಳು ಭಾಷೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಇದೀಗ ಕಾಲ ಪರಿಪಕ್ವವಾಗಿದೆ ಎಂದರು.
ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಮಾತನಾಡಿ, ಕಳೆದ 22ವರ್ಷಗಳ ಹಿಂದೆ ಆರಂಭಗೊಂಡ ತುಳು ಸಾಹಿತ್ಯ ಅಕಾಡೆಮಿಯು ಮಂಗಳೂರಿನ ಉರ್ವಸ್ಟೋರಿನಲ್ಲಿ ರೂ 5ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸಭಾಂಗಣ ಸಹಿತ ಸ್ವಂತ ಕಟ್ಟಡ ನಿರ್ಮಿಸುತ್ತಿದೆ. ಈಗಾಗಲೇ ಸುಮಾರು 200ಕ್ಕೂ ಮಿಕ್ಕಿ ತುಳು ಭಾಷೆಗೆ ಸಂಬಂಧಪಟ್ಟ ಪುಸ್ತಕಗಳನ್ನು ಅಕಾಡೆಮಿ ನೆರವಿನಲ್ಲಿ ಪ್ರಕಟಿಸಿ ಬಿಡುಗಡೆಗೊಂಡಿದ್ದು, ಕೆಲವೊಂದು ಕೃತಿಗಳು ಮರು ಮುದ್ರಣಗೊಳ್ಳುತ್ತಿದೆ ಎಂದು ತಿಳಿಸಿದರು.
*ತುಳು ಸಿರಿ ಪ್ರಶಸ್ತಿ ಪ್ರದಾನ:
ಇದೇ ವೇಳೆ ತಾಲ್ಲೂಕಿನ ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಮತ್ತು ದೈವಪಾತ್ರಿ ದೇಜಪ್ಪ ಬಾಚಕೆರೆ ಇವರಿಗೆ ‘ತುಳು ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧನೆಗಾಗಿ ಗಿರಿರಾಜ್ ವಗ್ಗ, ಕಾಂತಪ್ಪ ಶೆಟ್ಟಿ ಅಗರಿ, ಬಿ.ಆರ್. ಕುಲಾಲ್, ವಾಸು ಪಂಡಿತ, ಅಣ್ಣು ಪೂಜಾರಿ ಅಮ್ಟಾಡಿ, ಗೌರಿ ಪಾಲ್ತಾಜೆ, ಎಸ್. ರಹಿಮಾನ್ ಸಾಹೇಬ್, ಮೀನಾಕ್ಷಿ ಆಚಾರ್ಯ, ವಿಶ್ವನಾಥ ಶೆಟ್ಟಿ ಸೋಣರ್ಾಡು, ನಾರಾಯಣದಾಸ್ ಕಕ್ಯಪದವು, ಅಂತೋನಿ ಪಿಂಟೋ, ಶಶಿ ಬಂಡಿಮಾರ್, ಶೇಖರ ಪಂಬದ ಇವರನ್ನು ಸನ್ಮಾನಿಸಲಾಯಿತು.

* ಠರಾವು ಮಂಡನೆ:
ಈ ಹಿಂದಿನ ಹಲವು ಸಮ್ಮೇಳನಗಳಲ್ಲಿ ಕೈಗೊಂಡ ಹಲವು ಠರಾವು ಅನುಷ್ಠಾನಗೊಳ್ಳದಿರುವ ಹಿನ್ನೆಲೆಯಲ್ಲಿ ‘ತುಳು ಭಾಷೆ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು.’ ಎಂಬ ಏಕೈಕ ಠರಾವು ಇಲ್ಲಿನ ಸಮ್ಮೇಳನದಲ್ಲಿ ಮಂಡಿಸಲಾಯಿತು.
ಬಹುಮಾನ ವಿತರಣೆ:
ತುಳು ಆಟೋಟ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾಕೂಟ ಸಂಚಾಲಕ ಸುಕುಮಾರ್ ಬಂಟ್ವಾಳ, ದಾಮೋದರ ಏರ್ಯ, ಜಯರಾಜ್ ಭಂಡಾರಿಬೆಟ್ಟು, ಮಧುಸೂದನ್ ಶೆಣೈ ಸಹಕರಿಸಿದರು.
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಭಾನುವಾರ ರಾತ್ರಿ ಸಮಾರೋಪಗೊಂಡ ತಾಲ್ಲೂಕು ಮಟ್ಟದ ಪ್ರಥಮ ತುಳು ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಕಾವಳಕಟ್ಟೆ ಶ್ರುತಿ ನಾಟ್ಯಲಹರಿ ತಂಡದಿಂದ ‘ತುಳು ಜಾನಪದ ನಲಿಕೆ’ ಪ್ರದರ್ಶನಗೊಂಡಿತು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ತಹಶೀಲ್ದಾರ್ ಪುರಂದರ ಹೆಗ್ಡೆ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಅಕಾಡೆಮಿ ಸದಸ್ಯರಾದ ಗೋಪಾಲ ಅಂಚನ್, ವಿಜಯ ಶೆಟ್ಟಿ ಸಾಲೆತ್ತೂರು, ಮಾಜಿ ಸದಸ್ಯ ಡಿ.ಎಂ. ಕುಲಾಲ್, ಸ್ಥಳೀಯ ಪುರಸಭಾ ಸದಸ್ಯ ಭಾಸ್ಕರ ಟೈಲರ್, ಸಮಿತಿ ಸದಸ್ಯ ಸುಭಾಶ್ಚಂದ್ರ ಜೈನ್ ಮತ್ತಿತರರು ಇದ್ದರು.
ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಸ್ವಾಗತಿಸಿ, ನಿವೃತ್ತ ಮುಖ್ಯಶಿಕ್ಷಕ ಸೇಸಪ್ಪ ಮಾಸ್ಟರ್ ವಂದಿಸಿದರು. ಮಲ್ಲಿಕಾ ಶೆಟ್ಟಿ ಮತ್ತು ದಿನೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

