ಮೂಡುಬಿದಿರೆ : ಮಡಿವಾಳ ಸಮಾಜದ ಜನರು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವುದರಿಂದ ಈ ಜಾತಿಯನ್ನು ಪರಿಶಿಷ್ಠ ಜಾತಿಯ ಪಟ್ಟಿಗೆ ಸೇರಿಸಬೇಕೆಂದು ರಾಜ್ಯ ಸರ್ಕಾರವನ್ನು ಹಕ್ಕೊತ್ತಾಯ ಮಾಡುತ್ತಾ ಬಂದಿದ್ದರೂ ಸರಕಾರ ಸ್ಪಂದಿಸುತ್ತಿಲ್ಲ. ನವೆಂಬರ್ ಅಂತ್ಯದೊಳಗೆ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಯುವಶಕ್ತಿಯನ್ನು ಸೇರಿಸಿಕೊಂಡು ಉಗ್ರ ಹೋರಾಟವನ್ನು ನಡೆಸಲಿದ್ದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಮಡಿವಾಳರ ಶಕ್ತಿಯನ್ನು ತೋರಿಸುತ್ತೇವೆ ಎಂದು ಮಡಿವಾಳರ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ ಎಚ್ಚರಿಸಿದ್ದಾರೆ.
ಮೂಡುಬಿದಿರೆ ಮಡಿವಾಳ ಸಮಾಜ ಸೇವಾ ಸಂಘವು ದಶಮಾನೋತ್ಸವದಂಗವಾಗಿ ಇಲ್ಲಿನ ಪದ್ಮಾವತಿ ಕಲಾ ಮಂದಿರದಲ್ಲಿ ಭಾನುವಾರ ಆಯೋಜಿಸಿದ ಮಡಿವಾಳರ ಬ್ರಹತ್ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದ.ಕ ಜಿಲ್ಲೆಯಲ್ಲಿ ಮಡಿವಾಳರ ಸ್ಥಿತಿ ಉತ್ತಮವಾಗಿರಬಹುದು ಆದರೆ ಉತ್ತರ ಕರ್ನಾಟಕದಲ್ಲಿ ಮಡಿವಾಳರ ಪರಿಸ್ಥಿತಿ ಪರಿಶಿಷ್ಠರಿಗಿಂತಲೂ ಶೋಚನೀಯವಾಗಿದೆ. ಶೈಕ್ಷಣಿಕವಾಗಿ ಬೆಳೆಯಲು ತಮಗೆ ಎಸ್.ಸಿ ಗೆ ಸೇರ್ಪಡೆಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಬಗ್ಗೆ ಹಲವು ಸಮಾವೇಶ ಪ್ರತಿಭಟನೆಗಳನ್ನು ನಡೆಸಿದ್ದು ಮುಖ್ಯ ಮಂತ್ರಿಯವರೇ ಪರಿಶಿಷ್ಠ ಜಾತಿಗೆ ಸೇರಿಸಲು ಒಲವು ತೋರಿದ್ದರೂ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಸ್ಪಂದಿಸುತ್ತಿಲ್ಲ. ಇದಕ್ಕೆ ಸಂಬಂಧಿಸಿದ ಕಡತಗಳು ಅವರ ಕಛೇರಿಯಲ್ಲೇ ಧೂಳು ತಿನ್ನುತ್ತಿದೆ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಆಂಜನೇಯ ಸಹಿತ 32 ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಪಣ ತೊಡುವುದಾಗಿಯೂ ಅವರು ಸವಾಲು ಹಾಕಿದರು.
ಸಮಾವೇಶವನ್ನು ಉದ್ಘಾಟಿಸಿದ ಚಿತ್ರದುರ್ಗ ಮಡಿವಾಳ ಮಾಚಿದೇವ ಮಹಾ ಸಂಸ್ಥಾನ ಮಠದ ಶ್ರೀ ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿ ಆಶೀರ್ವಚನ ನೀಡಿ ಯಾವುದೇ ಸಮುದಾಯ ಮುಂದೆ ಬರಲು ಹಲವು ಸಾಧ್ಯತೆಗಳಿಗೆ. ಸಮುದಾಯದ ಪ್ರಗತಿ ಎಲ್ಲರ ಜವಾಬ್ದಾರಿಯಾಗಿದೆ. ಮಡಿವಾಳರು ಪರಿಶಿಷ್ಠ ಜಾರಿಗೆ ಸೇರಿದರೆ ಸಣ್ಣವರಾಗುತ್ತೇವೆ ಎಂಬ ಕೀಳರಿಮೆ ಸಲ್ಲದು. ಭವಿಷ್ಯದಲ್ಲಿ ನಮ್ಮ ಪೀಳಿಗೆ ಶಿಕ್ಷಣ ಉದ್ಯೋಗ ಮತ್ತಿತರ ರಂಗಗಳಲ್ಲಿ ಮುಂದೆ ಬರಬೇಕಾದರೆ ಪರಿಶಿಷ್ಠ ಜಾತಿಗೆ ಸೇರುವುದರಿಂದ ಅನುಕೂಲವಾಗಲಿದೆ. ಸಮುದಾಯದ ಬೆಳವಣಿಗೆಗೆ ಸಂಘಟನೆ ಅಗತ್ಯ. ವೈಯಕ್ತಿಕ ಪ್ರಯತ್ನದಿಂದ ಉನ್ನತಿ ಸಾಧಿಸುವುದರೊಂದಿಗೆ ಮೌಲ್ಯಯುತವಾದ ಬದುಕು ನಡೆಸಬೇಕು ಆಗ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ನುಡಿದರು.
ಕರಿಂಜೆ ಶ್ರೀ ಲಕ್ಷ್ಮೀಸತ್ಯನಾರಾಯಣ ವೀರಾಂಜನೇಯ ಸ್ವಾಮಿ ದೇವಸ್ಥಾನದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಮಡಿವಾಳರ ಸಂಘದ ರಾಜ್ಯ ಪ್ರ.ಕಾರ್ಯದರ್ಶಿ ಬಿ.ರಂಗಸ್ವಾಮಯ್ಯ, ಮುಂಬೈ ರಜಕ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸರೋಜಿನಿ ಕುಂದರ್, ದ.ಕ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ಬಿ.ಎನ್, ಕಾಸರಗೋಡು ರಜಕ ಸಂಘದ ಜಿಲ್ಲಾಧ್ಯಕ್ಷ ಸಚ್ಚಿದಾನಂದ ಖಂಡೇರಿ, ಕಾರ್ಕಳ ತಾಲೂಕು ಸಂಘದ ಅಧ್ಯಕ್ಷ ಸುರೇಶ್ ಮಡಿವಾಳ, ಬಂಟ್ವಾಳ ಸಂಘದ ಅಧ್ಯಕ್ಷ ಎನ್.ಕೆ ಶಿವ, ಸುಳ್ಯ ಸಂಘದ ಹರೀಶ್ ಬೂಡುಪನ್ನೆ, ಕುಂದಾಪುರದ ಸಂಘದ ಅಧ್ಯಕ್ಷ ಜಯರಾಜ್ ಕೋಟೇಶ್ವರ, ಬೆಳ್ತಂಗಡಿಯ ಅಧ್ಯಕ್ಷ ಜಯಂತ ಮಡಿವಾಳ ಮುಂಡಾಜೆ, ಮೂಲ್ಕಿ ಸಂಘದ ಅಧ್ಯಕ್ಷ ಕಟೀಲು ಸಂಜೀವ ಮಡಿವಾಳ, ಬೆಂಗಳೂರಿನ ಉದ್ಯಮಿಗಳಾದ ರಾಜೇಂದ್ರ ಕೋಟ್ಯಾನ್ ಮತ್ತು ಸೂರಜ್ ಸಾಲಿಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಮೂಡುಬಿದಿರೆ ಸಂಘದ ಅಧ್ಯಕ್ಷ ಗಣೇಶ್ ಟಿ.ಸಾಲಿಯಾನ್, ಮಾಜಿ ಅಧ್ಯಕ್ಷ ಶ್ಯಾಮ ಮಡಿವಾಳ, ಯುವ ಘಟಕದ ಅಧ್ಯಕ್ಷ ಪ್ರತೀಕ್ ಸಾಲಿಯಾನ್, ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ಕುಂದರ್ ಉಪಸ್ಥಿತರಿದ್ದರು.
ಪ್ರೇಮಾ ವಿ ಸಾಲಿಯಾನ್ ಸ್ವಾಗತಿಸಿದರು. ಸಾಣೂರು ಸತೀಶ್ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ನವೀನ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸುಜಾತ ಎ.ಸಾಲ್ಯಾನ್ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಹಿರಿಯ ಸಾಹಿತಿ ಸದಾನಂದ ನಾರಾವಿ ಅಧ್ಯಕ್ಷತೆಯಲ್ಲಿ ಸಮುದಾಯದ ಸಬಲೀಕರಣ ಎಂಬ ವಿಷಯದಲ್ಲಿ ವಿಚಾರಗೋಷ್ಠಿಗಳು ನಡೆದಿದ್ದು “ಮಹಿಳಾ ಸಶಕ್ತೀಕರಣ” ಎಂಬ ವಿಷಯದ ಕುರಿತು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶ್ಯಾಮಲಾ ಕುಂದರ್, ” ಕರ್ನಾಟಕ ಯುವ ಸಮುದಾಯದ ತಲ್ಲಣಗಳು” ಎಂಬ ವಿಷಯದ ಕುರಿತು ಕಾರ್ಕಳ ತಾ.ಪಂನ ಮಾಜಿ ಉಪಾಧ್ಯಕ್ಷ ರವೀಂದ್ರ ಕುಮಾರ್ ಹಾಗೂ “ಸಂಘಟನೆ ಮತ್ತು ನಾಯಕತ್ವ”ದ ಬಗ್ಗೆ ಸೋಮಯ್ಯ ಮಡಿವಾಳ ಪ್ರತಿಷ್ಠಾನದ ಅಧ್ಯಕ್ಷ ಸಾಣೂರು ಸತೀಶ್ ಸಾಲ್ಯಾನ್ ಉಪನ್ಯಾಸ ನೀಡಿದರು.
