ಬಂಟ್ವಾಳ:ಇಲ್ಲಿನ ಎಸ್ವಿಎಸ್ ದೇವಳ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶುಕ್ರವಾರ ಆರಂಭಗೊಂಡ ಎರಡು ದಿನಗಳ ಜಿಲ್ಲಾ ಮಟ್ಟದ ಕ್ರೀಡಾಕೂಟವು ಉದ್ಘಾಟನೆಗೊಂಡ ಕೆಲವೇ ಹೊತ್ತಿನ ಬಳಿಕ ಕಾಣಿಸಿಕೊಂಡ ದಿಢೀರ್ ಮಳೆಗೆ ಪಂದ್ಯಾಟ ರದ್ದುಗೊಂಡು ಮೂಡುಬಿದ್ರೆಗೆ ಸ್ಥಳಾಂತರಗೊಂಡ ಘಟನೆ ನಡೆದಿದೆ.
ಇಲ್ಲಿನ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ಸುಮಾರು 11ಗಂಟೆಗೆ ಪಂದ್ಯಾಟ ಆರಂಭಗೊಂಡು 600 ಮತ್ತು 800 ಮೀ. ಓಟ ಸ್ಪರ್ಧೆ  ನಡೆದು ಉದ್ದ ಜಿಗಿತ ಮತ್ತು ಎತ್ತರ ಜಿಗಿತ ಹಾಗೂ ಗುಂಡೆಸೆತ ಸ್ಪರ್ಧೆ  ನಡೆಯುತ್ತಿದ್ದಂತೆಯೇ ದಿಢೀರ್ ಮಳೆ ಬಂದಿದೆ. ಮಧ್ಯಾಹ್ನ ಬಳಿಕ ಈ ಕ್ರೀಡಾಂಗಣದಲ್ಲಿ ಮಳೆ ನೀರು ನಿಂತು ಜಾರತೊಡಗಿರುವುದನ್ನು ಕಂಡ ಕ್ರೀಡಾಳುಗಳು ಸೇರಿದಂತೆ ಅವರ ಪೋಷಕರು ಆಕ್ಷೇಪ ವ್ಯಕ್ತಪಡಿಸಿದರು. ಇದೇ ವೇಳೆ ಹಲವಾರು ಮಂದಿ ಏಕಾಯೇಕಿ ವೇದಿಕೆ ಮೇಲೇರಿ ಬಂದು ಕಾರ್ಯಕ್ರಮ ಸಂಘಟಕರಲ್ಲಿ ಪರಸ್ಪರ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು. ಇದರಿಂದಾಗಿ ಪಂದ್ಯಾಟ ರದ್ದುಗೊಳಿಸಿ ಮುಡುಬಿದ್ರೆಗೆ ಸ್ಥಳಾಂತರಗೊಳಿಸಿರುವ ಬಗ್ಗೆ ಧ್ವನಿವರ್ಧಕ ಮೂಲಕ ಘೋಷಿಸಲಾಯಿತು.

6btl-Bntwl

ಇಂದಿನಿಂದ ಕ್ರೀಡಾಕೂಟ:
ಇಲ್ಲಿನ ಅಕಾಲಿಕ ಮಳೆಯಿಂದ ಇದೇ 7ರಿಂದ 8ರತನಕ ಮೂಡುಬಿದ್ರೆ ಸ್ವರಾಜ್ ಮೈದಾನದಲ್ಲಿ ಈ ಕ್ರೀಡಾಕೂಟ ಮುಂದುವರಿಯಲಿದ್ದು, ಈಗಾಗಲೇ 600 ಮತ್ತು 800 ಮೀ. ಓಟ ಸ್ಪರ್ಧೆ  ಇಲ್ಲಿ ಪೂಣಗೊಂಡಿದೆ. ಉಳಿದಂತೆ ರಿಲೇ, ನಡಿಗೆ, ಎತ್ತರ ಜಿಗಿತ, ಉದ್ದ ಜಿಗಿತ, ಹ್ಯಾಮರ್ ಎಸೆತ, ಪೋಲ್ವಾಲ್ಟ್, ಹರ್ಡಲ್ಸ್, ಚಕ್ರ ಎಸೆತ, ಗುಂಡೆಸೆತ ಮತ್ತಿತರ ಸ್ಪರ್ಧೆ  ಮೂಡುಬಿದ್ರೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವೈ.ಶಿವರಾಮಯ್ಯ ಸ್ಪಷ್ಟಪಡಿಸಿದರು.

6btl-Vagvada
ಈ ಜಿಲ್ಲೆಯಲ್ಲಿ ಮಂಗಳೂರು ಮತ್ತು ಮೂಡುಬಿದ್ರೆಯಲ್ಲಿ ಮಾತ್ರ ಸಿಂಥೆಟಿಕ್ ಟ್ರ್ಯಾಕ್ ಹೊಂದಿದ್ದು, ವಲಯ ಮತ್ತು ತಾಲ್ಲೂಕು ಮಟ್ಟದ ಸ್ಫರ್ಧೆ  ಬಳಿಕ ಜಿಲ್ಲಾ ಮಟ್ಟದ ಸ್ಫರ್ಧೆಯನ್ನು ಪ್ರತೀ ವರ್ಷ ಒಂದೊಂದು ತಾಲ್ಲೂಕಿನಲ್ಲಿ ಆಯೋಜಿಸಲಾಗುತ್ತದೆ. ಈ ಬಾರಿ ಸುಮಾರು 673 ಮಂದಿ ಸ್ಫರ್ಧಾಳು ಭಾಗವಹಿಸಿದ್ದು, ಮಳೆ ಆರಂಭವಾಗುತ್ತಿದ್ದಂತೆಯೇ ನಮ್ಮ ತಾಂತ್ರಿಕ ಸಮಿತಿಯು ಪಂದ್ಯಾಟ ರದ್ದುಗೊಳಿಸಲು ತೀರ್ಮಾನಿಸಿತ್ತು. ಈ ಕ್ರೀಡಾಕೂಟ ನಡೆಸಲು ಸರ್ಕಾರದಿಂದ ಸಿಗುವ ರೂ 1.25ಲಕ್ಷ ಮೊತ್ತ ಇದಕ್ಕೆ ಸಾಕಾಗುತ್ತಿಲ್ಲ. ಇದರಿಂದಾಗಿ ಏಳು ವರ್ಷಗಳ ಬಳಿಕ ಬಂಟ್ವಾಳದಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟ ನಡೆಸಲು ಇಲ್ಲಿನ ದೈಹಿಕ ಶಿಕ್ಷಕರ ಸಂಘವು ಇಲ್ಲಿನ ಕ್ರೀಡಾಸಕ್ತರು ಮತ್ತು ಎಸ್ವಿಎಸ್ ದೇವಳ ಶಿಕ್ಷಣ ಸಂಸ್ಥೆ ಮುಖ್ಯಸ್ಥರನ್ನು ಸಂಪರ್ಕಿಸಿ ಕ್ರೀಡಾಕೂಟದ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ಇಲ್ಲಿನ ದೈಹಿಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸುಮಾರು ರೂ 10ಲಕ್ಷ ವೆಚ್ಚದಲ್ಲಿ ಕ್ರೀಡಾಕೂಟಕ್ಕೆ ಕ್ರೀಡಾಂಗಣ ಸಹಿತ ಎಲ್ಲಾ ರೀತಿಯಲ್ಲಿ ಸಜ್ಜುಗೊಳಿಸಿದ್ದಾರೆ. ಇದೀಗ ವರುಣನ ಅವಕೃಪೆಗೆ ಯಾರನ್ನು ಕೂಡಾ ಹೊಣೆಗಾರರನ್ನಾಗಿ ಮಾಡಲು ಅಸಾಧ್ಯ.

ಕಳೆದ 18 ವರ್ಷಗಳಿಂದ ಚಾಂಪಿಯನ್ ಸ್ಥಾನ ಹೊಂದಿರುವ ಈ ಜಿಲ್ಲೆಯ ಕ್ರೀಡಾಳುಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಸಜ್ಜುಗೊಳಿಸುವುದೇ ನಮ್ಮ ಮುಖ್ಯ ಧ್ಯೇಯವಾಗಿದೆ. ಸಿಂಥೆಟಿಕ್ ಟ್ರ್ಯಾಕ್ ಇಲ್ಲದಿದ್ದರೂ ಕಳೆದ ವರ್ಷ ಸುಳ್ಯ ತಾಲ್ಲೂಕಿನ ಪಂಜದಲ್ಲಿ ಕ್ರೀಡಾಕೂಟವು ಯಶಸ್ವಿಯಾಗಿ ನಡೆದಿತ್ತು ಎಂದು ಅವರು ಸುದ್ದಿಗಾರರಿಗೆ ವಿವರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶಿವಪ್ರಕಾಶ್, ಸಂಘದ ಜಿಲ್ಲಾಧ್ಯಕ್ಷ ಕೆ.ಎಚ್.ನಾಯಕ್, ಕಾರ್ಯದರ್ಶಿ  ರಾಮಕೃಷ್ಣ ಮಲ್ಲಾರ್, ತಾಲ್ಲೂಕು ಸಂಘದ ಅಧ್ಯಕ್ಷ ಜಗದೀಶ ಕಲ್ಲಡ್ಕ, ಸಂಘದ ಪದಾಧಿಕಾರಿಗಳಾದ ಸುರೇಶ ಶೆಟ್ಟಿ, ಜಯರಾಮ, ಹರೀಶ್, ರತ್ನಾವತಿ ಮತ್ತಿತರರು ಇದ್ದರು.
ಉದ್ಘಾಟನೆ:
ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅನುಪಸ್ಥಿತಿಯಲ್ಲಿ ಬಂಟ್ವಾಳ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನ ಆಡಳಿತ ಮೊಕ್ತೇಸರ ಮಾಣೂರು ಲಕ್ಷ್ಮಣ ಕಾಮತ್ ಉದ್ಘಾಟಿಸಿದ್ದರು. ಬಂಟ್ವಾಳ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಧ್ವಜಾರೋಹಣ ನೆರವೇರಿಸಿ, ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಧ್ವಜವಂದನೆ ಸ್ವೀಕರಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಜುಳಾ ಮಾಧವ ಮಾವೆ, ಶಾಹುಲ್ ಹಮೀದ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ.ಬಂಗೇರ, ಪುರಸಭೆ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯ ಜಗದೀಶ ಕುಂದರ್, ನಾಮ ನಿರ್ದೇಶಿತ ಸದಸ್ಯ ಪ್ರವೀಣ ಕಿಣಿ, ದೇವಳದ ಮೊಕ್ತೇಸರ ಎ.ದಾಮೋದರ ಪ್ರಭು ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *