ಬಜಪೆ : ಪತ್ನಿಗೆ ನಿರಂತರ ಚಿತ್ರಹಿಂಸೆ ನೀಡುತ್ತಿದ್ದ ಕುಪ್ಪೆಪದವು ಆಚಾರಿ ಜ್ವಾರದ ನಿವಾಸಿ, ಮೂಲತಃ ಉಳ್ಳಾಲದ ಮೊಹಮ್ಮದ್ ರಫೀಕ್(45) ಎಂಬಾತ ಪತ್ನಿಗೆ ಮೋಸ ಮಾಡಿ, ನೆರೆಮನೆಯ ಯುವತಿಯೊಂದಿಗೆ ಪರಾರಿಯಾದ ಘಟನೆ ಬಜಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕುಪ್ಪೆಪದವಿನ ಆಜ್ರಾ(38) ಎಂಬಾಕೆಯೊಂದಿಗೆ 22 ವರ್ಷದ ಹಿಂದೆ ಉಳ್ಳಾಲದ ಮಂಚಿಲದ ರಫೀಕ್ ಜೊತೆ ವಿವಾಹವಾಗಿದ್ದು, ದಂಪತಿಗೆ ಮಕ್ಕಳಾಗಿಲ್ಲ. ವಿವಾಹವಾದ ಆರಂಭದಲ್ಲಿ ಉಳ್ಳಾಲದಲ್ಲೇ ದಂಪತಿ ವಾಸಿಸುತ್ತಿದ್ದರೂ, ಆರು ವರ್ಷದ ಹಿಂದೆ ಈತ ಪತ್ನಿ ಜೊತೆ ಕುಪ್ಪೆಪದವಿನಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿದ್ದ. 15 ದಿನಗಳ ಹಿಂದೆ ಈತ ಪತ್ನಿಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು, ಗಾಯಗೊಂಡಿದ್ದ ಆಜ್ರಾಳು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಳು. ಆ ಸಂದರ್ಭದಲ್ಲಿ ರಫೀಕ್ ವಿರುದ್ಧ ಆಜ್ರಾಳ ಸಹೋದರ ಪೊಲೀಸ್ ದೂರು ನೀಡಿದ್ದರೂ, ಬಳಿಕ ಆಜ್ರಾ ಹೇಳಿಕೆ ಮೇರೆಗೆ ಪ್ರಕರಣ ರಾಜಿಯಲ್ಲಿ ಮುಗಿಸಲಾಗಿತ್ತು.\

rafik
ರಾಜಿ ಸಂದರ್ಭದಲ್ಲಿ ಇನ್ನೊಂದು ಮದುವೆಯಾಗುವುದಿಲ್ಲ ಎಂದು ಆಣೆ ಮಾಡಿದ್ದ ರಫೀಕ್ ನಾಲ್ಕು ದಿನಗಳ ಹಿಂದೆ ರಾತ್ರಿ ಪತ್ನಿಗೆ ಅವಾಚ್ಯ ಶಬ್ದಗಳಿಂದ ಬೈದು, ಮಾರಣಾಂತಿಕ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿ ನೆರೆಮನೆಯ ನಸೀಮಾ(ಹೆಸರು ಬದಲಿಸಲಾಗಿದೆ) ಎಂಬಾಕೆಯೊಂದಿಗೆ ಪರಾರಿಯಾಗಿದ್ದಾನೆ. ಗಾಯಾಳು ಆಜ್ರಾ ಮತ್ತೊಂದು ಬಾರಿ ಆಸ್ಪತ್ರೆಗೆ ದಾಖಲಾಗಿದ್ದು, ಪತಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದಾರೆ.
“ಆತನೊಬ್ಬ(ರಫೀಕ್) ಮೋಸಗಾರ. ಮಕ್ಕಳಿಲ್ಲದ ನನ್ನನ್ನು ಆತ ಅನಾಥೆಯಾಗಿಸಿದ್ದಾನೆ. ಆತನಿಂದ ಮತ್ತೊಂದು ಹೆಣ್ಣಿಗೆ ಮೋಸವಾಗಬಾರದು. ನನಗೆ ನ್ಯಾಯ ಕೊಡಿ” ಎಂದು ಆಜ್ರಾ ಮನವಿ ಮಾಡಿದರು.
“ರಫೀಕ್ ಮತ್ತು ನಸೀಮಾ ಪರಾರಿಯಾಗಲು ಆತನ ಸಹೋದರ ಮೊಹಮ್ಮದ್ ಶರೀಫ್ ಹಾಗೂ ಆತನ ಕುಟುಂಬಿಕರು ಕುಮ್ಮಕ್ಕು ನೀಡಿದ್ದು, ಬಂಧನದಿಂದ ತಪ್ಪಿಸಿಕೊಳ್ಳುವಲ್ಲಿ ಅವರು ಪೊಲೀಸರ ಮೇಲೆ ಒತ್ತಡ ಹೇರಿರುವ ಸಾಧ್ಯತೆ ಇದೆ. ಶರೀಫನ್ನು ವಿಚಾರಿಸಿದರೆ ರಫೀಕ್ ಎಲ್ಲಿದ್ದಾನೆಂದು ಗೊತ್ತಾಗುತ್ತದೆ. ಆದರೆ ಬಜಪೆ ಪೊಲೀಸರು ಪ್ರಕರಣದ ಕೂಲಂಕಷ ತನಿಖೆಗೆ ಹಿಂದೇಟು ಹಾಕಿದ್ದಾರೆ” ಎಂದು ಆಜ್ರಾಳ ಸಹೋದರ ಅಬ್ದುಲ್ ಲತೀಫ್ ದೂರಿದರು.
“ತನಿಖೆ ಮೇಲೆ ಯಾರ ಒತ್ತಡವೂ ಇಲ್ಲ. ರಫೀಕ್ ಬಂಧನಕ್ಕಾಗಿ ಪ್ರಯತ್ನ ಮುಂದುವರಿದಿದೆ” ಎಂದು ಬಜ್ಪೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

By suddi9

Leave a Reply

Your email address will not be published. Required fields are marked *