ಬಂಟ್ವಾಳ: ಇತ್ತೀಚೆಗೆ ಲೋಕಾರ್ಪಣೆಗೊಂಡಿರುವ ಬಂಟ್ವಾಳ ತಾಲೂಕಿನ ಸಜೀಪಮೂಡದ ಹಿಂದೂ ರುದ್ರಭೂಮಿಗೆ ರಾಜ್ಯ ಉಚ್ಚ ನ್ಯಾಯಾಲಯದ ತಡೆಯಾಜ್ಙೆ ಇರುವಾಗಲೇ ಉದ್ಘಾಟನೆ ನಡೆಸಿರುವ ಪಂಚಾಯತ್ ಅಧ್ಯಕ್ಷರ ಕ್ರಮ ಖಂಡನೀಯವಾಗಿದ್ದು, ಅವರ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಸಜೀಪಮೂಡ, ಬೊಳ್ಳಾಯಿ, ಪಟ್ಟುಗುಡ್ಡೆ ನಾಗರಿಕ ಸಮಿತಿ ತಿಳಿಸಿದೆ.

Jpeg
ಮಂಗಳವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಅಬ್ದುಲ್ ಕರೀಂ ಬೊಳ್ಳಾಯಿ ಅವರು 100 ಮೀಟರ್ ವ್ಯಾಪ್ತಿಯಲ್ಲಿರುವ ಜನವಸತಿ ಪ್ರದೇಶದಲ್ಲಿ ರುದ್ರಭೂಮಿ ನಿರ್ಮಿಸಲಾದ ಗ್ರಾ.ಪಂ.ನ ಕ್ರಮವನ್ನು ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯಲ್ಲಿ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಸೆ.4 ರಂದು ತಡೆಯಾಜ್ಙೆ ನೀಡಿ ಆದೇಶಿಸಿತ್ತು ಎಂದರು. ಆದರೆ ಪಂಚಾಯತ್ ಅಧ್ಯಕ್ಷರು ಸ್ಥಳೀಯ ನಾಗರಿಕರ ಗಮನಕ್ಕೂ ತಾರದೆ ಗುಟ್ಟಾಗಿ ಸೆ.7 ರಂದು ರುದ್ರಭೂಮಿಯ ಲೋಕಾರ್ಪಣೆ ಕಾರ್ಯಕ್ರಮ ನಡೆಸಿದ್ದು, ನ್ಯಾಯಾಂಗ ನಿಂದನೆಯಾಗಿದ್ದು,ಈ ಬಗ್ಗೆ ಅಧ್ಯಕ್ಷರ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದರು.
ಈ ರುದ್ರಭೂಮಿಯ ಅಕ್ಕಪಕ್ಕದಲ್ಲಿ ವಾಸ್ತವ್ಯದ ಮನೆಗಳು, ಬಾವಿ, ಆರಾಧನಾ ಕೇಂದ್ರಗಳು ಇದ್ದು, ಎಲ್ಲಾ ಅಂಶಗಳನ್ನು ಮುಂದಿಟ್ಟು ನಾಗರಿಕ ಸಮಿತಿಯ ನಜೀರ್ ಅಹಮ್ಮದ್ ಕೋರ್ಟಿನ ಮೋರೆ ಹೋಗಿದ್ದರು ಎಂದ ಅವರು ಪಂ.ಅಧ್ಯಕ್ಷರು ತಮ್ಮ ಪ್ರತಿಷ್ಠೆಯನ್ನು ಮೆರೆಯುವ ಉದ್ದೇಶದಿಂದ ರುದ್ರಭೂಮಿಯನ್ನು ಲೋಕಾರ್ಪಣೆಗೊಳಿಸಿದ್ದಾರೆ. ಈ ಬಗ್ಗೆ ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದರು.

ಜಿ.ಪಂ. ಮಾಜಿ ಅಧ್ಯಕ್ಷ ಸದಾನಂದ ಪೂಂಜ ಅವರ ಕೋರಿಕೆಯಂತೆ ಕಾದಿರಿಸಲಾಗಿದ್ದ ಸರಕಾರಿ ಜಮೀನಿನಲ್ಲಿ ಹಿಂದು ರುದ್ರಭೂಮಿ ನಿರ್ಮಿಸಲು ಮುಂದಾಗಿತ್ತು. ಅಂದಿನ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಆ ಜಮೀನು ಸೂಕ್ತ ಎಂದು ಆದೇಶಿಸಿದ್ದರು. ಆದರೆ ಪಂ.ನ ಹಾಲಿ ಅಧ್ಯಕ್ಷರ ವ್ಯಕ್ತಿಗತ ನಿಲುವಿನಿಂದಾಗಿ ಅದಕ್ಕೆ ತಡೆಯಾಗಿತ್ತು. ಇದೀಗ ರಾಜಕೀಯ ಉದ್ದೇಶಕ್ಕಾಗಿ ರುದ್ರಭೂಮಿಗೆ ಅಕ್ಷೇಪಿಸಿದ ಅವರೇ ಅಧ್ಯಕ್ಷರಾದ ಬಳಿಕ ತಮ್ಮ ಧೋರಣೆಯನ್ನು ಬದಲಾಯಿಸಲು ಕಾರಣವೆನೆಂಬುದನ್ನು ಗ್ರಾಮಸ್ಥರಿಗೆ ಮನವರಿಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಸೂಕ್ತ ಸರಕಾರಿ ಜಮೀನಿದ್ದರೂ, ನಾಗರಿಕರ ಆಕ್ಷೇಪದ ನಡುವೆ ಜನವಸತಿ ಇರುವಲ್ಲೇ ನಿರ್ಮಿಸುವ ಅಧ್ಯಕ್ಷರ ಇರಾದೆಯಾದರೂ ಏನೆಂಬುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದ್ದಾರೆ. ಪಂಚಾಯತ್ ವತಿಯಿಂದ ರುದ್ರಭೂಮಿಯ ಲೋಕಾರ್ಪಣೆ ಕಾರ್ಯಕ್ರಮ ನಡೆದಿಲ್ಲ, ಪಂಚಾಯತ್ ಈ ಕಾರ್ಯಕ್ರಮಕ್ಕೆ ನಯಾಪೈಸೆ ಖರ್ಚು ಕೂಡ ಮಾಡಿಲ್ಲ ಎಂದು ಪಂಚಾಯತ್ ಪಿಡಿಒ ತಿಳಿಸಿದ್ದಾರೆ ಎಂದ ಕರೀಂ.ಇದು ಅಧ್ಯಕ್ಷರ ಹಿತಾಸಕ್ತಿಯಿಂದ ಸದ್ದಿಲ್ಲದೆ ನಡೆದಿದೆ ಎಂದು ಅವರು ಪ್ರಶ್ನಯೊಂದಕ್ಕೆ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಮಿತಿಯ ನಜೀರ್ ಅಹ್ಮದ್,ಅಬ್ದುಲ್ ಜಲೀಲ್,ಫಾರೂಕ್ ಕಂಚಿಲ,ಹಸೈನಾರ್ ಕಂಚಿಲ,ಮಹಮ್ಮದ್ ರಫೀಕ್ ಮೊದಲಾದವರಿದ್ದರು.

By Suddi9

Leave a Reply

Your email address will not be published. Required fields are marked *