ಬಂಟ್ವಾಳ : ಆಟಿಡೊಂಜಿ ಕೂಟದಂತಹ ಕಾರ್ಯಕ್ರಮಗಳು ಶಿಕ್ಷಣದ ಒಂದು ಭಾಗವೂ ಹೌದು, ಶಾಲೆಗಳಲ್ಲಿ ಇಂತಹಾ ಕಾರ್ಯಕ್ರಮಗಳು ನಡೆಯುವುದು ಹೆಚ್ಚು ಪ್ರಯೋಜನಕಾರಿ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಅಭಿಪ್ರಾಯ ಪಟ್ಟಿದ್ದಾರೆ.
ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ “ಆಟಿಡೊಂಜಿ ಕೂಟ” ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಆಧುನಿಕತೆಯ ನಾಗಲೋಟದಿಂದ ಆಗುವ ಅಪಾಯಗಳ ಕುರಿತಾಗಿಯೂ ಮುಂದಿನ ಪೀಳಿಗೆಯನ್ನು ಜಾಗೃತಗೊಳಿಸಬೇಕಿದೆ, ಈ ಹಿನ್ನೆಲೆಯಲ್ಲಿ ತುಳುನಾಡಿನ ಆಚರಣೆಗಳು ಹಾಗೂ ಸಾಂಪ್ರದಾಯಿಕ ಆಹಾರಪದ್ದತಿಗಳ ಕುರಿತಾಗಿ ವಿದ್ಯಾಥರ್ಿಗಳಲ್ಲಿ ಅರಿವುಮೂಡಿಸಲು ಆಟಿಡೊಂಜಿ ಕೂಟ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು. ಬಂಟ್ವಾಳ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಆಗಸ್ಟ್ ತಿಂಗಳಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ ನಡೆಯಲಿದ್ದು, ಮಾಣಿ ಬಾಲವಿಕಾಸ ಶಾಲೆಯಲ್ಲಿ ಇದಕ್ಕೆ ಮುನ್ನುಡಿ ದೊರೆತಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಜಿ,ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್ ವಹಿಸಿದ್ದರು. ಹೆತ್ತವರು ವಿದ್ಯಾಥರ್ಿಗಳಿಗೆ ಶಿಕ್ಷಣ ಹಾಗೂ ಪ್ರೀತಿಯನ್ನು ನೀಡುವುದರ ಜೊತೆಯಲ್ಲಿ ಉತ್ತಮ ಸಂಸ್ಕಾರವನ್ನು ನೀಡಬೇಕೆಂದು ಅಭಿಪ್ರಾಯಿಸಿದರು. ಆಂಗ್ಲಮಾಧ್ಯಮ ಶಾಲೆಯಲ್ಲಿ ತುಳುವಿಗೆ ಗೌರವ ನೀಡುವಂತಾ ಕಾರ್ಯಕ್ರಮ ನಡೆಯುತ್ತಿರುವುದು, ಇತರ ಆಂಗ್ಲಮಾಧ್ಯಮ ಶಾಲೆಗಳಿಗೆ ಮಾದರಿ ಎಂದವರು ಶ್ಲಾಘಿಸಿದರು. ತೆಂಗಿನ ಹಿಂಗಾರ ಅರಳಿಸುವ ಮೂಲಕ ಹಾಗೂ ಆಟಿದ ತುಡರ್ ದೀಪವನ್ನು ಬೆಳಗಿಸುವ ಮೂಲಕ ಅತಿಥಿಗಳು ಆಟಿಡೊಂಜಿ ಕೂಟಕ್ಕೆ ಚಾಲನೆ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನಿವೃತ್ತ ದೈಹಿಕ ಶಿಕ್ಷಕ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ಆಷಾಡ ತಿಂಗಳನ್ನು ವಿಭಿನ್ನವಾಗಿ ಆಚರಿಸುತ್ತಿದ್ದ ಹಿರಿಯರ ನಂಬಿಕೆಗಳು ಮೂಡನಂಬಿಕೆಯಲ್ಲ, ಅವು ಮೂಲನಂಬಿಕೆಗಳು ಅವುಗಳ ಹಿಂದೆ ವೈಜ್ಞಾನಿಕ ಕಾರಣಗಳಿವೆ ಎಂದರು. ಹಿರಿಯರೇನೂ ಹೆಡ್ಡರಲ್ಲ, ಅವರಿಗೆ ಅಕ್ಷರ ಜ್ಞಾನ ಇಲ್ಲದಿದ್ದರೂ ಯಾವುದು ಬೇಕು ಯಾವುದು ಬೇಡ ಎನ್ನುವುದನ್ನು ಅರಿತಿದ್ದರು, ತುಳುನಾಡಿನ ವಿಶೇಷತೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯಕ್ರಮ ನಿರಂತರ ನಡೆಯಬೇಕಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಸದಸ್ಯ ದಿನೇಶ್ ಅಮ್ಟೂರು, ಶಾಲಾ ಸಂಚಾಲಕ ಪ್ರಹ್ಲಾದ್ ಶೆಟ್ಟಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಮೋಹನ್ ಪಿ.ಎಸ್ ಮಾತನಾಡಿದರು. ಶಾಲಾ ಆಡಳಿತಾಧಿಕಾರಿ ಸಿ.ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ರಮಣಿ, ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಬಾಲಕೃಷ್ಣ ಆಳ್ವ, ಕಸ್ತೂರಿ ಪ್ರದೀಪ್, ಬಾಲವಿಕಾಸ ಟ್ರಸ್ಟ್ನ ಅಧ್ಯಕ್ಷ ಬಿ.ಎಸ್.ನಾಯ್ಕ್, ಟ್ರಸ್ಟಿ ನಾರಾಯಣ ಶೆಟ್ಟಿ, ಶಿಕ್ಷಣ ಸಂಯೋಜಕರಾದ ರಮಾನಂದ , ಸುಜಾತ ಕುಮಾರಿ ಮೊದಲಾದವರು ವೇದಿಕೆಯಲ್ಲಿದ್ದರು. ವಿದ್ಯಾಥರ್ಿನಿ ಲಕ್ಷ್ಮೀ ಆಟಿ ಅಮವಾಸ್ಯೆಯ ವೈಶಿಷ್ಟ್ಯದ ಕುರಿತಾಗಿ ಮಾಹಿತಿನೀಡಿದಳು. ಬಾಲವಿಕಾಸ ಪ್ರೌಢಶಾಲಾ ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ಸ್ವಾಗತಿಸಿದರು, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಗ್ರೇಸ್ ಪಿ ಸಲ್ದಾನ ವಂದಿಸಿದರು. ಶಿಕ್ಷಕಿಯರಾದ ಯಜ್ಞೇಶ್ವರಿ ಹಾಗೂ ಜಯಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಆಟಿಡೊಂಜಿ ಕೂಟ ಕಾರ್ಯಕ್ರಮದ ಅಂಗವಾಗಿ ವಿವಿಧ ಬಗೆಯ ಆಟಿ ಖಾದ್ಯಗಳ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಶಾಲಾ ವಿದ್ಯಾಥರ್ಿಗಳು ಸೇರಿದಂತೆ ಗಣ್ಯರು,ಪೋಷಕರು ಖಾದ್ಯಗಳ ಸವಿ ಸವಿದರು.



