ಕಲ್ಲಡ್ಕ: ಯೋಗವು ದೈಹಿಕ ಜಾಡ್ಯತೆಗಳನ್ನು ಹೋಗಲಾಡಿಸಿ ಮನಸ್ಸು ಮತ್ತು ದೇಹವನ್ನು ಉಲ್ಲಾಸಗೊಳಿಸುವ ಕಾರ್ಯವನ್ನು ಮಾಡುತ್ತದೆ ಎಂದು ದ.ಕ. ಜಿಲ್ಲೆಯ ವಿದ್ಯಾಭಾರತಿಯ ಜಿಲ್ಲಾ ಶಾರೀರಿಕ ಶಿಕ್ಷಣ ಪ್ರಮುಖ್ ಹಾಗೂ ಶ್ರೀರಾಮ ಪದವಿ ಪೂರ್ವ ವಿಭಾಗದ ದೈಹಿಕ ಶಿಕ್ಷಣ ನಿರ್ದೇಶಕ ಕರುಣಾಕರ್ ಹೇಳಿದರು. 
ಅವರು ಶ್ರೀರಾಮ ಪದವಿ ವಿಭಾಗದ ಪ್ರತಾಪ ಕ್ರೀಡಾಸಂಘದ ವತಿಯಿಂದ ನಡೆದ ವಿಶ್ವ ಯೋಗ ದಿನಾಚರಣೆ ವಿಶೇಷ ಉಪನ್ಯಾಸ ಮಾಡುತ್ತಾ ಸನಾತನವಾಗಿರುವ ಯೋಗದ ಚಿಂತನೆಗಳು ಮತ್ತೆ ವಿಶ್ವಮಟ್ಟದಲ್ಲಿ ಗುರುತಿಸಿ ಆರಾಧಿಸುವ ಸ್ಥಿತಿ ಬಂದಿರುವುದು ಸಂತಸದ ವಿಷಯ. ಇಂದು ಯೋಗವು ಪ್ರಪಂಚಕ್ಕೆ ಭಾರತದ ಕೊಡುಗೆ ಎಂಬುದನ್ನು ವಿಶ್ವವೇ ಒಪ್ಪಿರುವುದು ನಮ್ಮೆಲ್ಲರ ಹಿರಿಯರಿಗೆ ಸಂದ ಗೌರವ, ದೇಹದ ಬೊಜ್ಜುತನವನ್ನು ಕರಗಿಸುವುದಲ್ಲದೆ ಮಾನಸಿಕ ಖಿನ್ನತೆಯನ್ನು ಹೋಗಲಾಡಿಸಿ ದೈಹಿಕ ಕ್ಷಮತೆಯನ್ನು ತಂದುಕೊಡುವ ಈ ಯೋಗದ ಅಭ್ಯಾಸವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಯೋಗ ದಿನಾಚರಣೆಯ ಅಂಗವಾಗಿ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು.ವೇದಿಕೆಯಲ್ಲಿ ಕ್ರೀಡಾಸಂಘದ ನಿರ್ದೇಶಕ ಅರವಿಂದ ಪ್ರಸಾದ ಉಪಸ್ಥಿತರಿದ್ದರು. ಉಪನ್ಯಾಸಕಿ ಶೈಲಜಾ ಸ್ವಾಗತಿಸಿ, ಉಪನ್ಯಾಸಕ ಯತಿರಾಜ್ ವಂದಿಸಿದರು.
