ಯಾದಗಿರಿ: ಇತ್ತೀಚೆಗೆ ಜೋಧಪುರ್- ಬೆಂಗಳೂರು ರೈಲಿನಲ್ಲಿ ನಡೆದಿದ್ದ ದರೋಡೆ ಬೆನ್ನಲ್ಲೇ ಅಹ್ಮದಾಬಾದ್- ಚೆನ್ನೈ ಎಕ್ಸ್ಪ್ರೆಸ್ ರೈಲಿನಲ್ಲೂ ಇಂತಹದ್ದೇ ಪ್ರಕರಣ ನಡೆದಿದೆ.ಅಹ್ಮದಾಬಾದ್- ಚೆನ್ನೈ ಎಕ್ಸ್ಪ್ರೆಸ್ ರೈಲ್ವೆ ಬೋಗಿಯಲ್ಲಿ ಚಾಕು ತೋರಿಸಿ ಕಳ್ಳರು ಪ್ರಯಾಣಿಕರಿಂದ ಹಣ ದರೋಡೆ ಮಾಡಿರುವ ಘಟನೆ ವಾಡಿಯಿಂದ ರಾಯಚೂರಿಗೆ ತೆರಳುತ್ತಿದ್ದಾಗ ನಡೆದಿದೆ.
ಅಹ್ಮದಾಬಾದ್- ಚೆನ್ನೈ ಎಕ್ಸ್ಪ್ರೆಸ್ (19420) ರೈಲಿನಲ್ಲಿ ಈ ಘಟನೆ ನಡೆದಿದ್ದು, ಪ್ರಯಾಣಿಕ ರಾಮಚಂದ್ರ ಎಂಬುವರನ್ನು ಬೆದರಿಸಿ ಮೂವರು ಕಳ್ಳರು 10 ಸಾವಿರ ದರೋಡೆ ಮಾಡಿದ್ದಾರೆ ಎನ್ನಲಾಗಿದೆ.ಈ ಹಿನ್ನೆಲೆ ಯಾದಗಿರಿ ನಿಲ್ದಾಣಕ್ಕೆ 5:20 ಆಗಮಿಸಿದ ರೈಲು 50 ನಿಮಿಷ ನಿಲ್ದಾಣದಲ್ಲಿಯೇ ನಿಂತು ತಡವಾಗಿ ತೆರಳಿದೆ. ಈ ಘಟನೆ ರಾಯಚೂರು ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಸುಕಿನ ಜಾವ ನಡೆದಿದೆ.
ಇತ್ತೀಚೆಗೆ ಜೋಧಪುರ್ದಿಂದ ಬೆಂಗಳೂರಿಗೆ ಬರುತ್ತಿದ್ದ ಎಕ್ಸ್ಪ್ರೆಸ್ ರೈಲಿನಲ್ಲಿ ಮಹಾರಾಷ್ಟ್ರದ ಪುಣೆ ಬಳಿ ದುಷ್ಕರ್ಮಿಗಳು ಪ್ರಯಾಣಿಕರಿಂದ ಲಕ್ಷಾಂತರ ರೂಪಾಯಿ ದರೋಡೆ ಮಾಡಿದ್ದರು. ಇಂತಹದ್ದೇ ಮತ್ತೊಂದು ಘಟನೆ ಮರುಕಳಿಸಿದ್ದು ರೈಲು ಪ್ರಯಾಣಿಕರನ್ನು ಆತಂಕಕ್ಕೀಡು ಮಾಡಿದೆ.
