ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಆರು ಗಂಟೆಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ ಭದ್ರತಾ ಪಡೆ ಯೋಧರು ಮೂವರು ಲಷ್ಕರ್-ಇ-ತೊಯ್ಬಾ ಉಗ್ರರನ್ನು ಬೇಟೆಯಾಡಿದ್ದಾರೆ.ಪೌಲ್ವಾನಾದ ಕೊಕಾಪುರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟ ಮೂರು ಸ್ಥಳೀಯ ಯುವಕರು ನಿಷೇಧಿತ ಎಲ್‌ಇಟಿ ಉಗ್ರರ ಗುಂಪಿಗೆ ಸೇರಿಕೊಂಡಿದ್ದು, ಇವರು ಜನನಿಬಿಡ ಪ್ರದೇಶದಲ್ಲಿ ವಾಸವಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದು ಪೌಲ್ವಾನಾ ಪ್ರದೇಶದಲ್ಲಿ ನಡೆದ ಮೊದಲ ಯಶಸ್ವಿ ಕಾರ್ಯಾಚರಣೆಯಾಗಿದ್ದು, ಸ್ಥಳೀಯ ಜನರೊಂದಿಗೆ ಉಗ್ರಗಾಮಿಗಳು ದೊಡ್ಡ ಜಾಲವನ್ನು ಹೊಂದಿದ್ದಾರೆ ಎಂದು ಶಂಕಿಸಲಾಗಿದೆ.ಇದಲ್ಲದೆ ಜೂನ್ 17 ರಂದು ಅನಂತ್‌ನಾಗ್ ಜಿಲ್ಲೆಯ ಅರ್ವಿನ್ ಗ್ರಾಮದಲ್ಲಿ ನಡೆದಿದ್ದ ಗುಂಡಿನ ಕಾಳಗದಲ್ಲಿ ಎಲ್‌ಇಟಿ ಕಮಾಂಡರ್ ಜುನೈದ್ ಮ್ಯಾಟ್ಟೊನನ್ನು ಹೊಡೆದುರುಳಿಸಲಾಗಿತ್ತು.ಕಳೆದ ಮೂರು ದಿನಗಳಲ್ಲಿ ಉಗ್ರಗಾಮಿಗಳ ವಿರುದ್ಧ ನಡೆದ ಎರಡನೇ ಯಶಸ್ವಿ ಕಾರ್ಯಾಚರಣೆ ಇದಾಗಿದೆ. ಮೊನ್ನೆ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪಟ್ಟಣದಲ್ಲಿ ನಡೆದಿದ್ದ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರನ್ನು ಸದೆಬಡಿಯಲಾಗಿತ್ತು.

