ಬಂಟ್ವಾಳ: ಪುರಸಭೆಯ ಸಭಾಂಗಣಕ್ಕೆ ಹವಾನಿಯಂತ್ರಿತ ಆಳವಡಿಸುವ ತುರ್ತು ಇಲ್ಲ ಅದರೆ ಇಲ್ಲಿನ ದಾಖಲೆಗಳನ್ನು ಮತ್ತು ಸ್ವತ್ತುಗಳನ್ನು ಸಮರ್ಪಕವಾಗಿ ಜೋಡಿಸಿಡಲು ದಾಸ್ತಾನು ಕೊಠಡಿಯನ್ನು ಮೊದಲಿಗೆ ಸರಿಪಡಿಸಿ ತನ್ಮೂಲಕ ಪುರಸಭಾಡಳಿತ ಒಂದು ಸಾಧನೆಯನ್ನಾದರೂ ಮಾಡಿದಂತಾಗುತ್ತದೆ. ಹೀಗೆಂದು ಅಡಳಿತ ಪಕ್ಷದ ಸದಸ್ಯರೊಬ್ಬರು ಮಾರ್ಮಿಕವಾಗಿ ಕಳೆದ ತಿಂಗಳ ಸಾಮಾನ್ಯ ಸಭೆಯಲ್ಲಿ ಗಮನ ಸೆಳೆದಿದ್ದರು. ಪುರಸಭೆಯ ಕೆಲವು ಸೊತ್ತುಗಳು,ದಾಖಲೆ ಪತ್ರಗಳು ಯವುದೇ ಭದ್ರತೆಯಿಲ್ಲದೆ ಆಲ್ಲಲ್ಲಿ ಚೆಲ್ಲಲ್ಪಟ್ಟಿರುವುದರಿಂದ ಗೋದಾಮಿನಂತೆ ಕಂಡು ಬರುತ್ತಿದೆ.
1974ರಲ್ಲಿ ಬಂಟ್ವಾಳ ಪುರಸಭೆ ಅಸ್ತಿತವ್ವಕ್ಕೆ ಬಂದ ನಂತರ ಈ ವರೆಗೆ ಸುಸಜ್ಜಿತ ರೆಕಾರ್ಡು ರೂಮ್ ನಿರ್ಮಿಸಿಲ್ಲ ಹೊಸ ಕಛೇರಿ ಕಟ್ಟಡ ನಿರ್ಮಾಣವಾದ ಬಳಿಕ ಹಳೇ ಕಛೇರಿ ಕಟ್ಟಡವನ್ನೇ ದಾಸ್ತಾನು ಕೊಠಡಿಯನ್ನಾಗಿಸಲಾಗಿದೆ. ಇಲ್ಲಿ ದಾರಿ ದೀಪಪಗಳ ಸಹಿತ ವಿವಿಧ ಸಾಮಾಗ್ರಿಗಳು ಹಾಗೂ ಹಳೇ ಉಪಯುಕ್ತ ಕಡತಗಳು ಆವ್ಯವಸ್ಥೆಯಿಂದಾಗಿ ಗೆದ್ದಲು ಹಿಡಿದಿದೆ. ಯಾವುದೇ ದಾಖಲೆಗಳು ಸುಜಿಜ್ಜಿತ ರೀತಿಯಲ್ಲಿ ಇರದೆ ಸಿಕ್ಕಸಿಕ್ಕಲ್ಲಿ ಬೇಕಾ ಬಿಟ್ಟಿಯಾಗಿ ಬಿಸಾಡಿರುವುದು ಇಲ್ಲಿ ಕಾಣುತ್ತದೆ. ಪುರಸಭೆಯ ಹಳೆಯ ಕಟ್ಟಡದಲ್ಲಿ ಗುಜರಿ ಸಾಮಾನುಗಳ ಜೊತೆಯಲ್ಲಿ ಭದ್ರತೆ ಇಲ್ಲದೆ ಅಗತ್ಯ ದಾಖಲೆ ಪತ್ರಗಳನ್ನು ಜೊಡಿಸಿರುವದು ಸಾಕಷ್ಟು ಅನುಮಾನಗಳನ್ನು ಸೃಷ್ಟಿ ಮಾಡುತ್ತದೆ. ಹಲವಾರು ವಿಷಯಗಳಗೆ ಸಂಬಂದಪಟ್ಟತೆ ಮತ್ತು ತೆರಿಗೆ ಹಾಗೂ ಇನ್ನಿತರ ಉದ್ದೇಶಗಳ ಬಹು ಪ್ರಾಮುಖ್ಯ ಸರಕಾರಿ ದಾಖಲೆಗಳು ಯಥಾವತ್ತಾಗಿ ಜೋಡಿಸಿ ಅದನ್ನು ಭದ್ರವಾಗಿ ಕಾಪಾಡಬೇಕಾದ ಆಡಳಿತ ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಟೀಕೆಗೆ ಗುರಿಯಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಪ್ರತ್ಯೇಕ ರೆಕಾರ್ಡು ರೂಮ್ ನಿರ್ಮಾಣ ಮಾಡಲು ಲಕ್ಷಾಂತರ ರೂ ಮೀಸಲಿಟ್ಟರೂ ಈ ಬಗ್ಗೆ ಇನ್ನು ಕೂಡ ಕಾರ್ಯಪ್ರವೃತ್ತರಾಗಿಲ್ಲ. ತೆರಿಗೆ ಪಾವತಿಸಲೋ ಅಥವಾ ಇನ್ಯಾವುದೋ ಕೆಲಸಕ್ಕೆಂದು ಬಂಟ್ವಾಳ ಪುರಸಭೆಯ ಹೊಸ ಕಟ್ಟಡದ ಒಳಗೆ ಬಂದರೆ ಫೈಲುಗಳ ರಾಶಿ ಕಂಡು ಅವಾಕ್ಕಾಗದೇ ಇರದು.
ಪುರವಾಸಿಗಳು ಕಛೇರಿಯ ಮೊದಲನೆ ಮಹಡಿಯಲ್ಲಿ ತೆರಿಗೆ ಪಾವತಿಸುವ ಪಕ್ಕದಲ್ಲೇ ಟಾಯ್ಲೆಟ್ ಇದೆ. ಆ ಟಾಯ್ಲೆಟ್ ಗೆ ಕಾಲಿಡುವ ಸಂದರ್ಭ ಬಲಕ್ಕೆ , ಗೋಣಿಯ ಕಟ್ಟುಗಳು, ಫೈಲುಗಳು ಆಲ್ಲಲ್ಲೇ ರಾಶಿ ಬಿದ್ದಿರುವುದು ಕಾಣಲು ಸಿಗುತ್ತವೆ. ಅಲ್ಲೇ ಪಕ್ಕದಲ್ಲಿರುವ ಕಪಾಟಿನ ಮೇಲೂ ಫೈಲುಗಳು. ಹಾಗೆ ಸ್ವಲ್ಪ ಮುಂದಕ್ಕೆ ಹೋದರೆ ಮೀಟಿಂಗ್ ಹಾಲ್. ಆ ಹಾಲ್ ಒಳಗೆ ಕಣ್ಣು ಹಾಯಿಸಿದರೆ, ಅಲ್ಲೂ ಫೈಲುಗಳ ರಾಶಿ..ಅಲ್ಲೇ ಕೆಲವು ಪಿಂಕ್ ಮತ್ತು ಬಿಳಿ ಹಾಳೆಗಳು ಕಂಡರೆ ನಿಮ್ಮ ತೆರಿಗೆ ಕಟ್ಟಿದ ದಾಖಲೆಗಳು ಅಲ್ಲೆ ಎಲ್ಲೋ ಇವೆ ಎಂದರ್ಥ.
ಪುರಸಭೆಯ ಕಡತಗಳು ಕೂಡ ಎಲ್ಲೆಂದರಲ್ಲಿ ಬಿದ್ದುಕೊಂಡಿವೆ. ಯಾವುದೇ ಭದ್ರತೆ ಇದಕ್ಕಿಲ್ಲ ಕಳೆದ ತಿಂಗಳ ಸಾಮಾನ್ಯ ಸಭೆಯಲ್ಲಿ ಅಡಳಿತ ಪಕ್ಷದ ಸದಸ್ಯ ವಾಸು ಪೂಜರಿ ಅವರು ಈ ಬಗ್ಗೆ ಸಭೆಯ ಗಮನ ಸೆಳೆದು ಸಭಾಂಗಣಕ್ಕೆ ಎಸಿ ಮುಖ್ಯವಲ್ಲ ಹಲವು ವರ್ಷಗಳಿಂದ ಪುರಸಭೆಯಲ್ಲಿ ಜೀವಂತವಾಗಿರುವ ಸಮಸ್ಯೆಗಳ ಪೈಕಿ ಕಡತಗಳನ್ನು ಜೋಡಿಸಿದಲು ದಾಸ್ತಾನು ಕೊಠಡಿಯ ಕೊರತೆ ಕಾಣುತ್ತಿದೆ. ಈ ಬಗ್ಗೆ ಗಮನ ಹರಿಸುವಂತೆ ಸಲಹೆ ನೀಡಿದರು. ಮುಂದಿನ ಒಂದು ತಿಂಗಳೊಳಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯಾಧಿಕಾರಿ ಸುಧಾಕರ ಭರವಸೆಯಂತೂ ನೀಡಿದ್ದಾರೆ.
ಬಂಟ್ವಾಳ ಪುರಸಭೆಗೆ ದಶಕಗಳ ಹಿನ್ನೆಲೆ ಇದೆ. ಹೊಸ ಕಟ್ಟಡ ನಿರ್ಮಾಣವಾದಾಗಲೂ ದಾಖಲೆಗಳನ್ನು ಎಲ್ಲಿ ಇಡುವುದು ಎಂಬ ಕುರಿತು ತೀರ್ಮಾನವಾಗದೇ ಇರುವುದು ವಿಪರ್ಯಾಸ. ಕಂಪ್ಯೂಟರ್ ಯುಗದಲ್ಲಿ ಪೆನ್ನಿನಲ್ಲಿ ದಾಖಲೆಗಳನ್ನು ಬರೆದಿಡುವ ವ್ಯವಸ್ಥೆ ನಮ್ಮನ್ನು ಇಪ್ಪತ್ತನೇ ಶತಮಾನಕ್ಕೆ ಮರಳಿ ಕೊಂಡೊಯ್ಯುವಂತೆ ಮಾಡುತ್ತದೆ. ಗಣಕಯಂತ್ರದ ಒಳಗೆ ಸರ್ವರ್ ನಲ್ಲಿ ಭದ್ರವಾಗಿಡುವ ವ್ಯವಸ್ಥೆ ಬಂಟ್ವಾಳ ಪುರಸಭೆಗೆ ಇನ್ನೂ ಬಂದಿಲ್ಲ. ನಗರಸಭೆಯಾಗಿ ಮೇಲ್ದರ್ಜೆಗೇರುವ ಹುರುಪಿನಲ್ಲಿರುವ ಹೊತ್ತಿನಲ್ಲೇ ಇಡೀ ಬಂಟ್ವಾಳ ನಗರವಾಸಿಗಳ ಆಸ್ತಿ ತೆರಿಗೆ ಸಹಿತ ವಿವಿಧ ದಾಖಲೆಗಳ ಸಂರಕ್ಷಣೆಗೆ ಪುರಸಭೆ ತುರ್ತು ವ್ಯವಸ್ಥೆ ಕಲ್ಪಿಸುವುದು ಅನಿವಾರ್ಯವೂ ಹೌದು.
