ಬಂಟ್ವಾಳ: ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಡಿಕೆ, ಗೇರು ಬೀಜ ಕಳವು ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಂಟ್ವಾಳ ವೃತ್ತ ನಿರೀಕ್ಷಕ ಬಿ.ಕೆ.ಮಂಜಯ್ಯ, ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕೇಪು, ಕೋಡಪದವು, ನೇರಳಕಟ್ಟೆ, ಸೂರ್ಯ ಕಡೆಗಳಲ್ಲಿ ಸುಮಾರು ಎರಡು ತಿಂಗಳಿನಿಂದ ನಡೆಯುತ್ತಿದ್ದ ಅಡಿಕೆ, ಗೇರುಬೀಜ ಕಳ್ಳತನ ಪ್ರಕರಣದ ಆರೋಪಿಗಳನ್ನು ಬಂಧಿಸಿ ಸೊತ್ತು ವಶಕ್ಕೆ ಪಡೆಯಲಾಗಿದೆ ಎಂದರು.
ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಅನ್ವರ್ ಅಲಿ(36), ಅದೇ ಗ್ರಾಮದ ಸಾಲ್ಮರ ನಿವಾಸಿ ಮುಹಮ್ಮದ್ ಇರ್ಫಾನ್(19) ಬಂಧಿತ ಆರೋಪಿಗಳಾಗಿದ್ದಾರೆ. ಇವರು ವಿವಿಧೆಡೆಗಳಿಂದ ಕಳವುಗೈದಿರುವ 6 ಕ್ವಿಂಟಲ್ ಅಡಿಕೆ, 3 ಕ್ವಿಂಟಲ್ ಗೇರುಬೀಜ ಹಾಗೂ ಕಳ್ಳತನ ಕೃತ್ಯಕ್ಕೆ ಬಳಸಿರುವ 1 ಮಾರುತಿ ರಿಡ್ಸ್, 1 ಮಾರುತಿ ಓಮ್ನಿ ಕಾರು, 2 ಆಟೋ ರಿಕ್ಷಾ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಸೊತ್ತುಗಳ ಒಟ್ಟು ಮೌಲ್ಯ 12.50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ ಎಂದರು ಅವರು ತಿಳಿಸಿದ್ದಾರೆ.
