ಬಂಟ್ವಾಳ:ನೀರು ಬಿಡಲು ತೆರಳಿದ್ದ ವ್ಯಕ್ತಿಯೊಬ್ಬರ ಮೇಲೆ ಹೊಂಚು ಹಾಕಿ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದು, ಸಮಯಪ್ರಜ್ಞೆ ಮರೆತ ಅವರು ಓಡಿ ದಾಳಿಯಿಂದ ಪಾರಾದ ಘಟನೆ ಸೋಮವಾರ ಬೆಳಗ್ಗೆ ಪುದು ಗ್ರಾಮದ ಕೋಡಿಮಜಲು ಎಂಬಲ್ಲಿ ನಡೆದಿದೆ.
ಕುಂಪನಮಜಲು ನಿವಾಸಿ ಕರೀಂ ದುಷ್ಕರ್ಮಿಗಳ ದಾಳಿಯಿಂದ ಪಾರಾದ ವ್ಯಕ್ತಿ. ಇವರು ಪುದು ಗ್ರಾಮ ಪಂಚಾಯತ್‍ನಿಂದ ಕುಂಪನ ಮಜಲು ಪರಿಸರಕ್ಕೆ ಕುಡಿಯುವ ನೀರು ಬಿಡಲು ನಿಯೋಜಿತರಾದ ವ್ಯಕ್ತಿಯಾಗಿದ್ದಾರೆ.
ಘಟನೆಯ ವಿವರ: ಎಂದಿನಂತೆ ಸೋಮವಾರ ಮುಂಜಾನೆ 5:30ರ ಸುಮಾರಿಗೆ ತನ್ನ ಸ್ಕೂಟರ್‍ನಲ್ಲಿ ಕೋಡಿಮಜಲು ಎಂಬಲ್ಲಿಗೆ ನೀರು ಬಿಡಲು ತೆರಳಿದಾಗ ದಾರಿ ಮಧ್ಯೆ ನಿಂತಿದ್ದ ವ್ಯಕ್ತಿಯೊಬ್ಬ ಸ್ಕೂಟರ್ ನಿಲ್ಲಿಸಿ ದಾರಿ ಕೇಳಿದ್ದಾನೆ. ಕುಂಪನಮಜಲಿಗೆ ಹೋಗುವ ದಾರಿ ಯಾವುದು ಎಂದು ಆತ ಕೇಳಿದಾಗ ಇದುವೆ ಕುಂಪನಮಜಲು ಎಂದು ಕರೀಂ ಉತ್ತರಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಕೂಟರ್ ಆಫ್ ಮಾಡಿ ಎಂದು ಆತ ಹೇಳಿ ಸ್ಕೂಟರ್ ಹತ್ತಿರಕ್ಕೆ ಬಂದಾಗ ಅನುಮಾನಗೊಂಡ ಅವರು ಕೂಡಲೇ ಸ್ಕೂಟರ್ ಮುಂದಕ್ಕೆ ಚಲಾಯಿಸಿಕೊಂಡು ಹೋಗಿ ನೀರಿನ ಟ್ಯಾಂಕ್ ಇರುವ ಕೋಡಿಮಜಲು ತಲುಪಿದಾಗ ಅಲ್ಲಿ ಇಬರು ಟ್ಯಾಂಕ್‍ನ ಹತ್ತಿರ ನಿಂತಿದ್ದರು. ಅಪಾಯದ ಸಮಯಪ್ರಜ್ಞೆ ಮರೆದ ಅವರು ಕೂಡಲೇ ಸ್ಕೂಟರ್ ಹತ್ತಿ ಹೋಗುವಾಗ ಇಬ್ಬರು ತಮ್ಮ ಕೈಯಲ್ಲಿದ್ದ ಮಾರಕಾಸ್ತ್ರಗಳು ಬೀಸಿದ್ದಾರೆ. ಆದರೆ ಕರೀಂರಿಗೆ ಮಾರಕಾಸ್ತ್ರ ತಾಗದಿರುವುದರಿಂದ ಅವರು ಅಪಾದಿಂದ ಪಾರಾಗಿದ್ದಾರೆ.
ಈ ಘಟನೆಯಿಂದ ಹೆದರಿದ ಕರೀಂರವರು ಸ್ಕೂಟರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗುವಾಗ ಒಂದೆಡೆ ಬಿದ್ದ ಪರಿಣಾಮ ಸಣ್ಣಪುಟ್ಟ ಗಾಯಗೊಂಡಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.
ಗಾಯಗೊಂಡಿರುವ ಕರೀಂ ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗ್ರಾಮಾಂತರ ಠಾಣೆ ಎಸ್ಸೈ ಉಮೇಶ್ ಹಾಗೂ ಅವರ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ಕರೀಂರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
