ಬಂಟ್ವಾಳ: ಕಾವಳಪಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಧ್ವ ಬರ್ಕಟ ಗೋಮಾಳ ಜಾಗದಲ್ಲಿ ಕಾನೂನು ಬಾಹಿರವಾಗಿ ಮತ್ತು ಸ್ಥಳೀಯ ನಿವಾಸಿಗಳ ಆಕ್ಷೇಪಣೆ ಇದ್ದರೂ ಕಪ್ಪು ಕಲ್ಲಿನ ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಉದ್ಯಮಕ್ಕೆ ಪರವಾನಿಗೆ ನೀಡಿರುವುದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ಮತ್ತು ಸಂತ್ರಸ್ತ ನಾಗರಿಕರ ರಕ್ಷಣಾ ವೇದಿಕೆ,ಗ್ರಾ.ಪಂ. ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾ.ಪಂ.ಮಾಜಿ ಅಧ್ಯಕ್ಷ ಮಾಣಿಕ್ಯರಾಜ್ ಜೈನ್ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ತಾನು ಗ್ರಾ.ಪಂ.ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಗಣಿಗಾರಿಕೆಗೆ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ್ದು,ಅದೇ ಪ್ರದೇಶವನ್ನು ಗೋಮಾಳಕ್ಕೆ ಮೀಸಲಿರಿಸಿ ಗೋಮಾಳ ಜಮೀನು ಮತ್ತು ಸ್ಮಶಾನ ಜಮೀನು ಮಂಜೂರುಗೊಳಿಸಲಾಗಿತ್ತು. ಆದರೆ ಇದೀಗ ಗಣಿಗಾರಿಕೆಗೆ ಪರವಾನಿಗೆ ನೀಡಿರುವುದು ಕಾನೂನು ಬಾಹಿರವಾಗಿದೆ ಎಂದು ಹೇಳಿದರು. ಶ್ರೀ ಕ್ಷೇತ್ರ ಕಾರಿಂಜದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಿವಪ್ಪ ಗೌಡ ನಿನ್ನಿಕಲ್ಲು ಅವರು ಮಾತನಾಡಿ ಸದ್ರಿ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದರಿಂದ ಶ್ರೀ ಕ್ಷೇತ್ರಕ್ಕೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಹಿಂದಿನ ಗೃಹ ಸಚಿವ ಡಾ|ವಿ.ಎಸ್.ಆಚಾರ್ಯ ಅವರ ಮೂಲಕ ಈ ಗಣಿಗಾರಿಕೆಯನ್ನು ಸಂಪೂರ್ಣ ನಿಷೇಧಿಸಿ ಗೋಮಾಳ ಜಮೀನಾಗಿ ಪರಿವರ್ತನೆಗೊಳಿಸಲಾಗಿತ್ತು. ಪ್ರಸ್ತುತ ಇಲ್ಲಿ ಗಣಿಗಾರಿಕೆಗೆ ಪರವಾಣಿಗೆ ನೀಡಿರುವುದು ತಪ್ಪು ಅದನ್ನು ಹಿಂಪಡೆದು ಸ್ಥಳೀಯ ಜನರ ನೆಮ್ಮದಿಗೆ ಅನುವು ಮಾಡಿಕೊಡಬೇಕು ಎಂದು ಹೇಳಿದರು. ಸ್ಥಳೀಯ ಸಂತ್ರಸ್ತರ ಪರವಾಗಿ ಹೋರಾಟ ನಡೆಸುವ ಸಾಮಾಜಿಕ ಕಾರ್ಯಕರ್ತ ರಮೇಶ್ ಕುಮಾರ್ ಅವರು ಮಾತನಾಡಿ 10 ವರ್ಷಗಳ ಹಿಂದಿನಿಂದ ಈ ಗಣಿಗಾರಿಕೆಯನ್ನು ಸಂಪೂರ್ಣವಾಗಿ ವಿರೋಧಿಸುತ್ತಿದ್ದು ಸಂಬಂಧಿತ ಇಲಾಖೆಗೆ ತಪ್ಪು ಮಾಹಿತಿ ನೀಡಲಾಗಿದೆ. ಸ್ಥಳೀಯ ನಿವಾಸಿಗಳ ಸಹಿಯನ್ನು ನಕಲು ಮಾಡಿ ಗಣಿ ಇಲಾಖೆಯಿಂದ ಒಪ್ಪಿಗೆ ಪತ್ರ ಪಡೆಯಲಾಗಿದೆ. ಇದನ್ನು ಉಗ್ರವಾಗಿ ಖಂಡಿಸಲಾಗುತ್ತಿದ್ದು ಕೂಡಲೇ ಗಣಿಗಾರಿಕೆ ಪರವಾನಿಗೆಯನ್ನು ಹಿಂಪಡೆಯದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಬಳಿಕ ಪ್ರತಿಭಟನಾಕಾರರು ಪಂ.ಅ.ಅಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಪ್ರಮುಖರಾದ ಜನಾರ್ಧನ ಪೂಜಾರಿ,ನಾಗರಿಕ ರಕ್ಷಣಾ ವೇದಿಕೆ ಅಧ್ಯಕ್ಷ ಮತ್ತು ಸದಸ್ಯರು ಪಾಲ್ಗೊಂಡಿದ್ದರು.
