ಮನೆ ದುರಸ್ತಿ, ಶೌಚಾಲಯ ನಿರ್ಮಾಣ ಅನುದಾನ ಹೆಚ್ಚಳಕ್ಕೆ ಆಗ್ರಹ
ಬಂಟ್ವಾಳ:ಹಳೆ ಮನೆ ದುರಸ್ತಿಗೊಳಿಸಲು ರೂ 25ಸಾವಿರಕ್ಕೆ ಬದಲಾಗಿ ರೂ 50ಸಾವಿರ ಮೊತ್ತದ ಅನುದಾನ ನೀಡುವುದರ ಜೊತೆಗೆ ಶೌಚಾಲಯ ನಿರ್ಮಿಸಲು ರೂ 10ಸಾವಿರಕ್ಕೆ ಬದಲಾಗಿ ರೂ ಅ5ಸಾವಿರ ಮೊತ್ತದ ಅನುದಾನ ಒದಗಿಸಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದ್ದಾರೆ.ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ ಪಂಗಡ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡ ಗಂಗಾಧರ ಕೋಟ್ಯಾನ್ ಮತ್ತಿತರರು ಈ ಬಗ್ಗೆ ಧ್ವನಿ ಎತ್ತಿದರು.

ಇಲ್ಲಿನ ಪಲ್ಲಮಜಲು-ಪರಾರಿ ರಸ್ತೆಗೆ ತಾಂತ್ರಿಕ ಸಮಸ್ಯೆ ನೆಪವೊಡ್ಡಿ ಮುಂದೂಡಿದ ಕಾಂಕ್ರಿಟೀಕರಣ ಕಾಮಗಾರಿ ತ್ವರಿತಗೊಳಿಸಬೇಕು ಎಂಬ ಆಗ್ರಹ ಸಭೆಯಲ್ಲಿ ಕೇಳಿ ಬಂತು. ಇನ್ನೊಂದೆಡೆ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ನಡುವಿನ ವೃತ್ತಕ್ಕೆ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿಡುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು. ಈ ನಡುವೆ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ಪ್ರತಿಕ್ರಿಯಿಸಿ, ಈಗಾಗಲೇ ಮೆಲ್ಕಾರ್ ವೃತ್ತಕ್ಕೆ ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪ ಹೆಸರಿಡಲು ಪುರಸಭೆ ನಿರ್ಧರಿಸಿದೆ ಎಂದು ತಿಳಿಸಿದರು. ಬಿ.ಸಿ.ರೋಡ್‍ನ ಕೈಕಂಬ ಗಿರಿಜನ ಸಂಚಾರಿ ಆರೋಗ್ಯ ಘಟಕ ಸಿಬ್ಬಂದಿ ವರ್ಗಾವಣೆ, ಮೊಡಂಕಾಪು ವಿದ್ಯಾರ್ಥಿನಿಲಯ ದುಸ್ಥಿತಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ರಾಜಾ ಪಲ್ಲಮಜಲು, ಜನಾರ್ದನ ಚೆಂಡ್ತಿಮಾರು, ವಿಶ್ವನಾಥ ಚೆಂಡ್ತಿಮಾರು ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಪುರಸಭಾ ಸದಸ್ಯರಾದ ವಸಂತಿ ಚಂದಪ್ಪ, ಜಗದೀಶ ಕುಂದರ್, ವಾಸು ಪೂಜಾರಿ, ಜೆಸಿಂತಾ, ಪ್ರಭಾ ಆರ್.ಸಾಲ್ಯಾನ್ ಮತ್ತಿತರರು ಇದ್ದರು. ಸಮುದಾಯ ಅಧಿಕಾರಿ ಮತ್ತಡಿ, ಮೇಲ್ವಿಚಾರಕಿ ಉಮಾವತಿ ಪೂರಕ ಮಾಹಿತಿ ನೀನೀಡಿದರು.
—




