ಬಂಟ್ವಾಳ:  ಪ್ರಸಕ್ತ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಕೃಷಿ ಕ್ಷೇತ್ರದಲ್ಲಿ ಆಧುನಿಕ ಯಂತ್ರೋಪಕರಣ ಬಳಕೆ ಮತ್ತು ವೈಜ್ಞಾನಿಕ ಸಂಶೋಧನೆಗಳ ಲಾಭ ಪಡೆಯುವಲ್ಲಿ ರೈತರು ಮುಂದಾಗಬೇಕು. ಆ ಮೂಲಕ ಕಡಿಮೆ ವೆಚ್ಛದಲ್ಲಿ ಗರಿಷ್ಟ ಬೆಳೆ ಪಡೆದು ಕೃಷಿಯನ್ನು ಲಾಭದಾಯಕವನ್ನಾಗಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಹೇಳಿದ್ದಾರೆ.

samaropa

ತಾಲ್ಲೂಕಿನ ಬಿ.ಸಿ.ರೋಡ್ ಸಮೀಪದ ಗಾಣದಪಡ್ಪು ಮೈದಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗುರುವಾರ ಸಮಾರೋಪಗೊಂಡ ಎರಡು ದಿನಗಳ ತಾಲ್ಲೂಕು ಮಟ್ಟದ ಕೃಷಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸರ್ಕಾರವು ‘ಕೃಷಿ ಯಂತ್ರಧಾರೆ’ ಯೋಜನೆಯಡಿ ಬಾಡಿಗೆಗೆ ಯಂತ್ರೋಪಕರಣ ಒದಗಿಸುತ್ತಿದ್ದು, ಕೃಷಿ ಚಟುವಟಿಕೆಯಲ್ಲಿ ಯುವಜನತೆ ಪಾಲ್ಗೊಳ್ಳುವಂತೆ ಮಕ್ಕಳಿಗೆ ಬಾಲ್ಯದಿಂದಲೇ ಸ್ವಾವಲಂಬನೆ ಮತ್ತು ಆರೋಗ್ಯದಾಯಕ ಜೀವನ ನಡೆಸಲು ಪ್ರೋತ್ಸಾಹ ನೀಡಬೇಕು ಎಂದರು.

ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ, ಕೃಷಿ ಉತ್ಸವದ ಮೂಲಕ ನಾವು ಹೊಸತನ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಕೃಷಿ ಉತ್ಸವ ಸಮಿತಿ ಅಧ್ಯಕ್ಷ ರೊನಾಲ್ಡ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನ ಜಾಗೃತಿ ವೇದಿಕೆ ಅಧ್ಯಕ್ಷ ಎನ್.ಪ್ರಕಾಶ ಕಾರಂತ, ಒಕ್ಕೂಟ ಅಧ್ಯಕ್ಷ ಸದಾನಂದ ಗೌಡ, ನರಿಕೊಂಬು ಸತ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಿತ್ಯಾನಂದ ಸಪಲ್ಯ, ಉದ್ಯಮಿ ಕೆ.ಸೇಸಪ್ಪ ಕೋಟ್ಯಾನ್, ಯೋಜನೆ ಜಿಲ್ಲಾ ನಿರ್ದೇಶಕ ಚಂದ್ರಶೇಖರ ನೆಲ್ಯಾಡಿ ಮತ್ತಿತರರು ಇದ್ದರು. ಸಮಿತಿ ಗೌರವ ಸಲಹೆಗಾರ ಕೈಯ್ಯೂರು ನಾರಾಯಣ ಭಟ್ ಸ್ವಾಗತಿಸಿ, ಯೋಜನಾಧಿಕಾರಿ ಸುನಿತಾ ನಾಯಕ್ ವಂದಿಸಿದರು. ಮೇಲ್ವಿಚಾರಕ ನವೀನ್ ಶೆಟ್ಟಿ ಮತ್ತು ಮೇಲ್ವಿಚಾರಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *