ಬಂಟ್ವಾಳ: ತಾಲ್ಲೂಕಿನ ಅಮ್ಮುಂಜೆ ಸಮೀಪದ ಕಲಾಯಿ ಮತ್ತು ಮಲ್ಲೂರು ಮತ್ತಿತರ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಹುಚ್ಚುನಾಯಿ ಕಾಟ ವಿಪರೀತವಾಗಿದ್ದು, ಇದನ್ನು ಕೂಡಲೇ ನಿಯಂತ್ರಿಸುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳನ್ನು ಇಲ್ಲಿನ ನಾಗಿಕು ಆಗ್ರಹಿಸಿದ್ದಾರೆ. ಈಗಾಗಲೇ ಪುಟ್ಟ ಶಾಲಾ ಮಕ್ಕಳು ಸಹಿತ ಸುಮಾರು ಆರು ಮಂದಿಗೆ ಹುಚ್ಚುನಾಯಿ ಕಡಿದಿದ್ದು, ಐದು ಜಾನುವಾರುಗಳಿಗೂ ಕಚ್ಚಿದೆ. ಇದರಿಂದಾಗಿ ಸ್ಥಳೀಯರು ಭಯಭೀತರಾಗಿದ್ದಾರೆ.
ಹುಚ್ಚು ನಾಯಿ ಕಡಿತಕ್ಕೊಳಗಾಗಿದ್ದಾರೆ ಎನ್ನಲಾಗಿರುವ ಸ್ಥಳೀಯ ನಿವಾಸಿಗಳಾದ ಶಂಕರ್ ಎಂಬವರ ಪುತ್ರ ತಮ್ಮು, ಮೋನಪ್ಪ ಪೂಜಾರಿ ಪುತ್ರಿ ಅನಿತ, ಶಫಿಯ ಇವರು ಮಂಗಳೂರು ಜಿಲ್ಲಾಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ನಡುವೆ ಬಶೀರ್, ರಜಿತ್ ಶೆಟ್ಟಿ, ಹನೀಫ್ ಎಂಬವರಿಗೆ ಸೇರಿದ ಜಾನುವಾರುಗಳಿಗೆ ಕೂಡಾ ಹುಚ್ಚು ನಾಯಿ ಕಡಿದು ಗಾಯಗೊಳಿಸಿದೆ ಎಂದು ತಿಳಿದು ಬಂದಿದೆ. ಸುಮಾರು ಮೂರ್ನಾಲ್ಕು ಹುಚ್ಚುನಾಯಿ ಇಲ್ಲಿ ಓಡಾಡುತ್ತಿದ್ದು, ಈ ಪೈಕಿ ಒಂದನ್ನು ಈಗಾಗಲೇ ಸ್ಥಳೀಯರು ಹಿಡಿದು ಕೊಮದು ಹಾಕಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
