ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಮಂಡಳಿ ನಾಲ್ಕು ಹಂತದ ಹೊಸ ತೆರಿಗೆ ಪದ್ಧತಿಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ನ.3ರಂದು ಗುರುವಾರ ಘೋಷಿಸಿದ್ದಾರೆ.ಕನಿಷ್ಠ ಶೇ.5ರಿಂದ ಗರಿಷ್ಠ ಶೇ.28ರಷ್ಟು ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಆಹಾರ ಧಾನ್ಯಗಳಿಗೆ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ. ಕೇಂದ್ರ ಸರ್ಕಾರ ಒಟ್ಟು ನಾಲ್ಕು ಹಂತದ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಿದ್ದು, ವಿವಿಧ ವಸ್ತುಗಳ ಮೇಲೆ ಶೇ,5, ಶೇ.12, ಶೇ.18 ಮತ್ತು ಶೇ.28ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಸಭೆಯ ನಂತರ ಅರುಣ್ ಜೇಟ್ಲಿ ಅವರು ಪ್ರಕಟಿಸಿದ್ದಾರೆ.
ಸದ್ಯಕ್ಕೆ ಇರುವ ಹದಿನೇಳು ಪರೋಕ್ಷ ತೆರಿಗೆಗಳು ಇನ್ನು ಮುಂದೆ ಇರಲ್ಲ. ಅದರ ಬದಲಿಗೆ ಏಕರೂಪದ ಜಿಎಸ್ ಟಿ ಜಾರಿಗೆ ಬಂದಿದೆ. ಇದರಿಂದ ತೆರಿಗೆ ಜಾರಿ ಹಂತದಲ್ಲಿ ಆಗುವ ಖರ್ಚು ಕಡಿಮೆ ಆಗುತ್ತದೆ. ತೆರಿಗೆ ತಪ್ಪಿಸಿಕೊಳ್ಳಲ್ಲ. ಇನ್ ಪುಟ್ ತೆರಿಗೆ ಕ್ರೆಡಿಟ್ ಸರಬರಾಜುದಾರರಿಗೆ ತೆರಿಗೆ ಪಾವತಿಸಲು ಪ್ರೇರಣೆ ನೀಡುತ್ತದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿಗಾ ಇರುವುದರಿಂದ, ತೆರಿಗೆ ರಹಿತ ವಸ್ತುಗಳ ಸಂಖ್ಯೆ ಕಡಿಮೆಯಾಗುತ್ತದೆ.

ಈಗ ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿರುವ ತೆರಿಗೆ ದರವು ಒಂದೇ ರೀತಿಯಾಗುತ್ತದೆ. ವಿವಿಧ ದರಗಳಿರುವುದರಿಂದ ಶೇ 20-30ರಷ್ಟು ಬೆಲೆಯಲ್ಲೂ ಹೆಚ್ಚಳವಾಗುತ್ತಿದೆ. ಇನ್ನು ಮುಂದೆ ಆ ಸಮಸ್ಯೆ ಇಲ್ಲ ಏಕರೂಪದ ಮಾರುಕಟ್ಟೆ ನಿರ್ಮಾಣವಾಗುತ್ತದೆ.
ಯಾವುದೇ ರಾಜ್ಯದ ಗಡಿ ಭಾಗದಲ್ಲಿ ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಲ್ಲುವ ವಾಹನಗಳು ಹಾಗೂ ಭಾರತದಲ್ಲಿ ಇಂಥ ಟ್ರಕ್ ಗಳು ದಿನಕ್ಕೆ 280 ಕಿ.ಮೀ. ಸಾಗುತ್ತವೆ. ಅದೇ ಅಮೆರಿಕಾದಲ್ಲಿ 800 ಕಿ.ಮೀ. ಸಾಗುತ್ತವೆ. ಅಂದರೆ ಜಿಎಸ್ ಟಿಯಿಂದ ಸರಕು ಸಾಗಣೆ ವೆಚ್ಚ ಕಡಿಮೆಯಾಗುತ್ತೆ. ಹಲವು ಬಂಡವಾಳ ಸರಕುಗಳಿಗೆ (ಕ್ಯಾಪಿಟಲ್ ಗೂಡ್ಸ್) ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಸಿಗ್ತಿರಲಿಲ್ಲ. ಜಿಎಸ್ ಟಿಯಲ್ಲಿ ಪೂರ್ತಿಯಾಗಿ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಸಿಕ್ಕರೆ ಬಂಡವಾಳ ಸರಕುಗಳ ವೆಚ್ಚದಲ್ಲಿ ಶೇ 12-14ರಷ್ಟು ಕಡಿಮೆಯಾಗುತ್ತದೆ. ಇದರಿಂದ ಬಂಡವಾಳ ಸರಕಿನ ಮೇಲಿನ ಹೂಡಿಕೆ ಶೇ 6ರಷ್ಟು, ಒಟ್ಟಾರೆ ಶೇ 2ರಷ್ಟು ಹೆಚ್ಚಳವನ್ನು ನಿರೀಕ್ಷೆ ಮಾಡಬಹುದು.
ಮೇಕ್ ಇನ್ ಇಂಡಿಯಾ: ತೆರಿಗೆಯಲ್ಲಿ ಏಕರೂಪ ಆಗಿ, ಅಂತರರಾಜ್ಯ ತೆರಿಗೆ ಹೊರೆ ತಗ್ಗಿ, ಸರಕು-ಸಾಗಣೆ ವೆಚ್ಚವೂ ಕಡಿಮೆ ಆಗುತ್ತದೆ. ಆಮದು ವಸ್ತುಗಳಿಗೆ ಹೆಚ್ಚು ಸುರಕ್ಷತೆ ದೊರೆಯುತ್ತದೆ. ಇದರಿಂದ ದೇಶಿ ವಸ್ತುಗಳು ಹೆಚ್ಚು ಸ್ಪರ್ಧಾತ್ಮಕ ಬೆಲೆಗೆ ದೊರೆಯುತ್ತವೆ.
ಸದ್ಯಕ್ಕೆ ಅಂತರರಾಜ್ಯ ತೆರಿಗೆ ಅಂದರೆ ಶೇ 2ರಷ್ಟು ಮಾತ್ರ. ಹಾಗಂದರೆ ಅ ರಾಜ್ಯದೊಳಗೆ ಮಾತ್ರ ಉತ್ಪನ್ನಗಳಿಗೆ ವಿಧಿಸುವಂಥದ್ದು. ಜಿಎಸ್ ಟಿ ಅಂದರೆ ರಾಷ್ಟ್ರಮಟ್ಟದ ಮಾರುಕಟ್ಟೆ. ಇದನ್ನು ಎಲ್ಲ ರಾಜ್ಯಗಳಿಗೂ ಹಂಚಲಾಗುತ್ತದೆ. ಇದರಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ರಾಜ್ಯಗಳಿಗೆ ಅನುಕೂಲವಾಗುತ್ತದೆ.[ಜಿಎಸ್ ಟಿ ಅಂಗೀಕಾರಕ್ಕೆ ನರೇಂದ್ರ ಮೋದಿ ಸರ್ಕಾರದ ಹೆಜ್ಜೆ] ಎಚ್ ಎಸ್ ಬಿಸಿ ಅಂದಾಜು ಮಾಡಿರುವಂತೆ ಇನ್ನು ಮೂರರಿಂದ ಐದು ವರ್ಷದಲ್ಲಿ 80 ಬೇಸಿಸ್ ಪಾಯಿಂಟ್ ಹೆಚ್ಚಳವಾಗುತ್ತದೆ. ಅದು ಒಟ್ಟಾರೆಯಾಗಿ ನೋಡಿದಾಗ ಇನ್ನು ಮೂರರಿಂದ ಐದು ವರ್ಷದಲ್ಲಿ ಜಿಡಿಪಿ ದರವು ಶೇ 0.9-1.7ರಷ್ಟು ಹೆಚ್ಚಾಗುತ್ತದೆ.
ರಾಜ್ಯ ಸರಕಾರಗಳ ನಿರ್ಬಂಧ ಹಾಗೂ ತೆರಿಗೆಗಳು ಇ ಕಾಮರ್ಸ್ ವ್ಯವಹಾರವನ್ನು ಗೋಜಲಾಗಿಸಿದೆ. ಅ ಕಾರಣಕ್ಕೆ ಕೆಲವು ಮಾರಾಟಗಾರರು ಕೆಲವು ರಾಜ್ಯಗಳಿಗೆ ಸರಕನ್ನು ಕೊಡುವುದೇ ಇಲ್ಲ. ಇನ್ನು ಮುಂದೆ ಈ ಸಮಸ್ಯೆ ಇರುವುದಿಲ್ಲ.
ಐಷಾರಾಮಿ ಕಾರು, ತಂಬಾಕು ಇತರ ವಸ್ತುಗಳಿಗೆ ಕ್ಲೀನ್ ಎನರ್ಜಿ ಸೆಸ್ ಜತೆಗೆ ಸೆಸ್ ಹಾಕಲಾಗಿದ್ದು, ಆದಾಯದಲ್ಲಿ ನಷ್ಟವಾಗುವ ರಾಜ್ಯಗಳಿಗೆ ಪರಿಹಾರವಾಗಿ ನೀಡಲಾಗುವುದು. ಈ ರೀತಿಯ ಪರಿಹಾರ ರೂಪದ ಸೆಸ್ ಮುಂದಿನ ಐದು ವರ್ಷಗಳ ಕಾಲ ಇರುತ್ತದೆ. ಜಿಎಸ್ ಟಿ ಜಾರಿಯಾದ ಮೊದಲ ವರ್ಷ ರಾಜ್ಯಗಳ ಆದಾಯದಲ್ಲಿ ಆಗುವ ನಷ್ಟವನ್ನು ಸರಿದೂಗಿಸಲು 50 ಸಾವಿರ ಕೋಟಿ ಪಾವತಿಸಬೇಕಾಗುತ್ತದೆ ಎಂದು ಜೇಟ್ಲಿ ಹೇಳಿದರು.

