ಬೆಂಗಳೂರು: `ಏಡ್ಸ್ ಎಂಬ ಮಹಾಮಾರಿಯನ್ನು ಬರೀ ಕಾಂಡೋಮ್ ಧರಿಸಿ ಹತ್ತಿಕ್ಕಲು ಸಾಧ್ಯವಿಲ್ಲ, ಅದರ ಬದಲಿಗೆ ನೈತಿಕ ಮೌಲ್ಯವನ್ನು ಧರಿಸಿ ಏಡ್ಸ್ ರೋಗ ಹತ್ತಿಕ್ಕಲು ಸಾಧ್ಯ’ ಎಂಬ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿರುವುದು ಭಾರೀ ವಿವಾದಕ್ಕೆ ಮತ್ತು ಬಿಸಿಬಿಸಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಡಾ. ಹರ್ಷವರ್ಧನ್ ಅವರು, “ಏಡ್ಸ್ ವಿರುದ್ಧದ ಅಭಿಯಾನದಲ್ಲಿ ಕಾಂಡೋಮ್ ಬಳಸುವಿಕೆಯ ಕುರಿತು ಹೆಚ್ಚಿನ ಒತ್ತಡ ತರುವ ಅಗತ್ಯವಿಲ್ಲ. ಕಾಂಡೋಮ್ ಬಳಸುತ್ತಿರುವವರೆಗೆ ಅನೈತಿಕ ಸಂಬಂಧ ಇರಿಸಿಕೊಳ್ಳುವುದು ಸರಿ ಎಂಬ ಇದು ತಪ್ಪು ಸಂದೇಶವನ್ನು ಸಾರುತ್ತದೆ” ಹೇಳಿಕೆ ನೀಡಿದ್ದರು.
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ(ಎನ್ಎಸಿಓ)ಗೆ ಡಾ. ಹರ್ಷವರ್ಧನ್ ಅವರು, ಏಡ್ಸ್ ತಡೆಗಟ್ಟಲು ಕಾಂಡೋಮ್ ಬಳಕೆಯ ಬಗ್ಗೆ ಹೆಚ್ಚಿನ ಒತ್ತಡ ತರುವ ಬದಲು, ನೈತಿಕತೆಯ ಪಾಠವನ್ನು ಜನರಿಗೆ ನೀಡಬೇಕು ಎಂದು ಆದೇಶ ನೀಡಿದ್ದಾರೆ. ಜನರಿಗೆ ನೈತಿಕತೆಯ ಪಾಠದ ಅಗತ್ಯವಿದೆ ಎಂದು ಎನ್ಎಸಿಓದ ಮುಖ್ಯಸ್ಥ ವಿಕೆ ಸುಬ್ಬುರಾಜ್ ಅವರು ಕೂಡ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇದು ನರೇಂದ್ರ ಮೋದಿಯವರ ಕಾಂಡೋಮ್ ಅಭಿಯಾನಕ್ಕೆ ತದ್ವಿರುದ್ಧವಾಗಿದೆ. 2006ರಲ್ಲಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಏಡ್ಸ್ ರೋಗ ಮತ್ತು ಎಚ್ಐವಿ ಸೋಂಕು ನಿಯಂತ್ರಿಸಲು ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳ ಬಳಕೆಯ ಬಗ್ಗೆ ಅಭಿಯಾನ ಆರಂಭಿಸಿದ್ದರು.

