ಮುಂಬಯಿ : ಬಿಲ್ಲವ ಜಾಗೃತಿ ಬಳಗದ 162 ನೇ ನಾರಾಯಣಗುರು ಜಯಂತಿ ಆಚರಣೆಯು ಸೆ. 25 ರಂದು ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಡೊಂಬಿವಲಿ ಪೂರ್ವ ಸರ್ವೇಶ್ ಸಭಾಗೃಹದಲ್ಲಿ ಜರಗಿತು.
.
ಧಾರ್ಮಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಳಗದ ಅಧ್ಯಕ್ಷ ಎನ್. ಟಿ. ಪೂಜಾರಿಯವರು ಮಾತನಾಡುತ್ತಾ ನಮ್ಮ ಸಮಾಜವು ಇದೀಗ ವಿವಿಧ ಕ್ಷೇತ್ರದಲ್ಲಿ ಮುಂದುವರಿದಿದ್ದು ಒಗ್ಗಟ್ಟಿನ ಕೊರತೆಯಿಂದ ರಾಜಕೀಯದಲ್ಲಿ ನಮ್ಮವರ ಕೊರತೆ ಕಂಡುಬರುತ್ತಿದೆ, ಎಂದರು.


ಗೌರವ ಅತಿಥಿಯಾಗಿ ಆಗಮಿಸಿದ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ರು ಈ ಸಂದರ್ಭದಲ್ಲಿ ಮಾತನಾಡುತ್ತಾ ನಾರಾಯಣ ಗುರುಗಳ ತತ್ವದಂತೆ ನಾವೆಲ್ಲರೂ ಜೀವನದಲ್ಲಿ ಸೂಕ್ತ ಬದಲಾವಣೆ ತರೋಣ, ಒಗ್ಗಟ್ಟಿನಿಂದ ಮುಂದುವರಿಯೋಣ ಎಂದರು.

ಪುರೋಹಿತ ಎಂ. ಜೆ. ಪ್ರವೀಣ್ ಭಟ್ ಆಶೀರ್ವಚನ ನೀಡುತ್ತಾ ಸಂಘಟನೆಯೇ ಬಲವಾದ ಶಕ್ತಿ ಎಂದು ಗುರುಗಳು ಪ್ರತಿಪಾದಿಸಿದ್ದು ಒಗ್ಗಟ್ಟಿನಿಂದ ಸಮಾಜ ಬಾಂಧವರು ಒಂದಾಗುತ್ತಾರೆ ಎಂದರು. ಮುಖ್ಯ ಅತಿಥಿ ಹರೀಶ್ ಶೆಟ್ಟಿ, ಬಳಗದ ಗೌರವ ಅಧ್ಯಕ್ಷ ಸತೀಷ್ ಪೂಜಾರಿ, ಉಪಾಧ್ಯಕ್ಷ ಪುರುಷೋತ್ತಮ ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಕರ್ಕೇರ ಮಾತನಾಡಿದರು.


ಈ ಸಂದರ್ಭದಲ್ಲಿ ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯ ಶಿಕ್ಷಕ ಜೆ. ಎಂ. ಕೋಟ್ಯಾನ್ ದಂಪತಿಯನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಬಳಗದ ಇತರ ಪದಾಧಿಕಾರಿಗಳು ಸದಸ್ಯರುಗಳು, ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜೆ. ಜೆ. ಕೋಟ್ಯಾನ್ ನಿರ್ವಹಿಸಿದ್ದು, ರವಿ ಕುಕ್ಯಾನ್ ವಂದಿಸಿದರು.

