ಮುಂಬಯಿ: ನವಿಮುಂಬಯಿ ವಾಶಿಯ ಅಲ್ಲಿನ ಸಿಡ್ಕೋ ಪ್ರದರ್ಶನಾಲಯ ಕೇಂದ್ರದ ಸಭಾಗೃಹದಲ್ಲಿ ಕಳೆದ ಭಾನುವಾರ ಸಂಜೆ ಹ್ಯೂಮನಿಟಿ ಫಸ್ಟ್ ಫೌಂಡೇಶನ್ (ಹೆಚ್‍ಎಫ್‍ಎಫ್) ಆಯೋಜಿಸಲ್ಪಟ್ಟ 4ನೇ ಹೆಚ್‍ಹೆಚ್‍ಎಫ್ ಉತ್ಸವದ ಭವ್ಯ ಸಾಮಾಜಿಕ ಮತ್ತು ಮನೋರಂಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸುಮಾರು 63 ಸೆಬೆಬ್ರೆಟಿಗಳು ಮತ್ತು ಗೌರವ್ವಾನಿತರ ಸಮ್ಮುಖದಲ್ಲಿ ವಾರ್ಷಿಕ ಪುರಸ್ಕಾರ ಪ್ರದಾನಿಸಲ್ಪಟ್ಟಿತು.




ಹೆಚ್‍ಎಫ್‍ಎಫ್ ಪುರಸ್ಕಾರವನ್ನು ಕಲಾಜಗತ್ತು ರೂವಾರಿ ತೋನ್ಸೆ ವಿಜಯಕುಮಾರ್ ಶೆಟ್ಟಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಪತ್ರಕರ್ತರ ಭವನ ಸಮಿತಿ ಕಾರ್ಯಧ್ಯಕ್ಷ ಡಾ| ಶಿವ ಎಂ.ಮೂಡಿಗೆರೆ, ದಾಯ್ಜಿವರ್ಲ್ಡ್ ಡಾಟ್‍ಕಾಂ ಸಂಸ್ಥೆಯ ಸ್ಥಾಪಕ ವಾಲ್ಟರ್ ನಂದಳಿಕೆ (ಪರವಾಗಿ ಪತ್ರಕರ್ತ, ದಾಯ್ಜಿವರ್ಲ್ಡ್‍ನ ಮುಂಬಯಿ ಬ್ಯೂರೋ ಚೀಫ್ ರೋನ್ಸ್ ಬಂಟ್ವಾಳ್), ಅಬುಧಾಬಿ ಉದ್ಯಮಿ ಸರ್ವೋತ್ತಮ ಶೆಟ್ಟಿ, ಛಾಯಾಚಿತ್ರಗಾರ ಅಸ್ಟ್ರೋ ಮೋಹನ್ ಉಡುಪಿ, ಅಸಾದ್ ಖಾನ್ ಕುವೇಯ್ಟ್, ಕ್ಯಾಪ್ಟನ್ ಟಿ.ತಂಗಪ್ಪನ್ ಕೇರಳ, ಕು| ರೈನಾ ಚಂದರ್ಕರ್ ಸೇರಿದಂತೆ ಸುಮಾರು 60ಕ್ಕೂ ಅಧಿಕ ಸಾಧಕರು ಪುರಸ್ಕಾರ ಸ್ವೀಕರಿಸಿದರು.
ಮುಖ್ಯ ಅತಿಥಿಯಾಗಿ ಮಹಾರಾಷ್ಟ್ರ ರಾಜ್ಯ ಹ್ಯೂಮನ್ ರೈಟ್ಸ್ ಕಮೀಶನ್‍ನ ಅಧ್ಯಕ್ಷ ಜಸ್ಟೀಸ್ ಎಸ್.ಆರ್ ಬನ್ನೂರ್‍ಮಠ್, ಗೌರವ ಅತಿಥಿಗಳಾಗಿ ಸಂಜೀತ್ ಕುಮಾರ್, ಮಲ್ಕಿತ್ ಸಿಂಗ್, ಎಸ್.ಗಫರ್, ಹ್ಯೂಮನಿಟಿ ಫಸ್ಟ್ ಫೌಂಡೇಶನ್‍ನ ರಾಷ್ಟ್ರೀಯ ಸಂಸ್ಥಾಪಕ ನವೇದ್ ಶೇಖ್, ರಾಷ್ಟ್ರೀಯ ಅಧ್ಯಕ್ಷ ಹೇಮಂತ್ ಮಕ್ವಾನ, ಪಂಡರ್ ಶೆಟ್ಟಿ ಕುವೇಯ್ಟ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಸಾಧಕರಿಗೆ ಪುರಸ್ಕಾರ ಪ್ರದಾನಿಸಿ ಗೌರವಿಸಿದರು.


ಪುರಸ್ಕಾರಕ್ಕೆ ನಿವೃತ್ತ ಸರ್ವೋಚ್ಚ ನ್ಯಾಯಲಯದ ಜಸ್ಟೀಸ್ ನಿಟ್ಟೆ ಸಂತೋಷ್ ಹೆಗ್ಡೆ, ಪದ್ಮಶ್ರೀ ಡಾ| ಬಿ.ಆರ್ ಶೆಟ್ಟಿ ದುಬಾಯಿ, ಆಳ್ವ’ಸ್ ಶಿಕ್ಷಣ ಸಂಸ್ಥೆ ಮೂಡಬಿದ್ರೆ ಇದರ ಕಾರ್ಯಾಧ್ಯಕ್ಷ ಡಾ| ಎಂ.ಮೋಹನ್ ಆಳ್ವ, ಸಮಾಜ ಸೇವಕರುಗಳಾದ ಲಾರೇನ್ಸ್ ಡಿ’ಸೋಜಾ, ನಕ್ರೆ ಸತೀಶ್ಚಂದ್ರ ಶೆಟ್ಟಿ, ಸಿಐಡಿ ಖ್ಯಾತಿಯ ಚಿತ್ರನಟ ದಯಾನಂದ ಶೆಟ್ಟಿ, ಯುವ ಪತ್ರಕರ್ತ ಸಿದ್ಧಿ ಪೂಜಾರಿ ಸೇರಿದಂತೆ ಅನೇಕರನ್ನು ಆಯ್ಕೆಗೊಳಿಸಲಾಗಿತ್ತು.



