ಕೊರಗಜ್ಜನನ್ನು ಉತ್ತರ ಭಾಗದಲ್ಲಿ ಕೊರಗಜ್ಜ ಅಂತ, ದಕ್ಷಿಣ ಭಾಗದಲ್ಲಿ ನೀಚ ಅಂತ ಈ ಸ್ವಾಮಿಯನ್ನು ಆರಾಧಿಸುತ್ತಾರೆ. ಪಣಂಬೂರಿನಲ್ಲಿ ಓಡಿ ಮತ್ತು ಅಚ್ಚು ಮೈರೆದಿ ಅನ್ನುವ ಕೊರಗ ದಂಪತಿಗಳಿಗೆ ಒಂದು ಗಂಡು ಮಗು ಹುಟ್ಟುತ್ತದೆ. ಅವರಿಗೆ ತನಿಯ ಅನ್ನುವ ಹೆಸರನ್ನು ಇಟ್ಟಿದ್ದರು ಅನ್ನುವ ಪ್ರತೀತಿ ಇದೆ. ತನಿಯ 30 ದಿವಸದ ಮಗು ಇರುವಾಗ ಅವನ ತಂದೆ ಮತ್ತು ತಾಯಿ ತೀರಿ ಹೋಗುತ್ತಾರೆ. ತನಿಯ ಅನಾಥನಾಗುತ್ತಾನೆ. ಅವನು ಅಳುತ್ತಿರುವಾಗ ಬೈದೆರೆ ಜಾತಿಗೆ ಸೇರಿದ ಮೈರಕ್ಕ ಬೈದೆದಿ ಮತ್ತು ಅವರ ಮಗ ಚೆನ್ನಯ್ಯನನ್ನು ತನಿಯ ನೋಡುತ್ತಾನೆ. ಮೈರಕ್ಕನ ಬಳಿ ಬಂದು ಅಮ್ಮಾ ನನಗೆ ಬಟ್ಟೆ ಕೊಡಿ ಎಂದು ಕೇಳುವಾಗ ಅವರು ತನ್ನ ತಲೆಯ ನೀರು ಹೀರಿಕೊಳ್ಳಲು ಕಟ್ಟಿದ ಬಟ್ಟೆಯನ್ನೇ ಆ ಮಗುವಿಗೆ ಕೊಟ್ಟು ಮಗುವನ್ನು ತನ್ನ ಜೊತೆ ಕರೆದುಕೊಂಡು ಹೋಗುತ್ತಾರೆ.
ಮೈರಕ್ಕ ಶೇಂದಿ ಮಾರುವವರಾಗಿದ್ದರು. ಹೀಗಿರುವಾಗ ಒಂದು ದಿನ ತನಿಯನ ಬಳಿ ತಂದ ಶೇಂದಿಯನ್ನು ಮಂಡೆಗೆ ತುಂಬಿಸಲು ಹೇಳುತ್ತಾರೆ. ಅವನು ತುಂಬಿಸುತ್ತಾನೆ. ಆದರೆ ಇಲ್ಲಿ ವಿಚಿತ್ರ ಏನೆಂದರೆ ಏಳು ರಾತ್ರಿ ಏಳು ಹಗಲು ಕಳೆದರೂ ಶೇಂದಿ ಖಾಲಿಯಾಗುವುದಿಲ್ಲ. ಕಡೇಗೆ ಆ ಶೇಂದಿಯನ್ನು ಕದ್ರಿಯ ಮಂಜುನಾಥ ದೇವರಿಗೆ ಶೇಂದಿ ಎಲ್ಲಾ ಖಾಲಿಯಾದ್ರೆ ಕಂಚಿನ ಪೊಡಕೆಯನ್ನು ಅರ್ಪಿಸುತ್ತೇನೆಂದು ಹರಕೆ ಮಾಡುತ್ತಾನೆ. ಆವಾಗ ಶೇಂದಿ ಎಲ್ಲಾ ಖಾಲಿಯಾಗುತ್ತದೆ. ಖಾಲಿಯಾದ ಖುಷಿಯಲ್ಲಿ ತನಿಯನಿಗೆ ಅಡಿಕೆ ಮರದ ಎಲೆಯಿಂದ ಪೊಣಲಿಯನ್ನು ಮಾಡಿಕೊಡುತ್ತಾರೆ.

ಹೀಗೆ ಕಾಲ ಕಳೆದಂತೆ ತನಿಯ ದೊಡ್ಡವನಾಗುತ್ತಾನೆ. ಕದ್ರಿಗೆ ಹೇಳಿದ ಹರಕೆಯ ಪ್ರಕಾರ ಮೈರಕ್ಕ ಬೈದಿದಿ ಕಂಚಿನ ಪೊಡಕೆಯನ್ನು ಮಾಡಿಸುತ್ತಾಳೆ. ಅದನ್ನು ಎತ್ತಲು ಏಳು ಜನರ ಸಹಾಯ ಬೇಕಿತ್ತು. ಏಳು ಮಂದಿಯ ಊಟ, ಶೇಂದಿ, ಎಲೆ ಅಡಿಕೆಯನ್ನು ತಿಂದು ಏಳು ಜನ ಎತ್ತಿ ಹರಕೆ ತೀರಿಸುವ ಬದಲು ಅವನೊಬ್ಬನೇ ಅದನ್ನೆತ್ತಿಕೊಂಡು ಹೋಗಿ ಕದ್ರಿಯ ದೇವಾಸ್ಥಾನದ ಹೊರಗೆ ನಿಂತು ಹರಕೆಯನ್ನು ಒಳಗೆ ಎಸೆಯುತ್ತಾನೆ. ಇದನ್ನು ನೋಡಿದ ಜನರಿಗೆ ಆಶ್ಚರ್ಯವೆನಿಸುತ್ತದೆ. ತನಿಯ ಒಬ್ಬ ಅಸಾಮಾನ್ಯ ವ್ಯಕ್ತಿ ಎಂದು ಎಲ್ಲರೂ ತಿಳಿಯುತ್ತಾರೆ.

ದೇವಸ್ಥಾನದ ಹೊರಗೆ ಮಾಪಾಳು ಹುಳಿಯನ್ನು ತನ್ನ ಹೆಂಡತಿಗೆ ಕೊಯ್ಯಲು ಹೋಗುವಾಗ ಮಾಯಾವಾಗಿ ಮಯ ಕಲ್ಲಾಗಿ ಅಲ್ಲಿ ನೆಲೆಯಾಗಿ ತುಳುನಾಡಿನ ಶಕ್ತಿಯಾಗಿ ಮೆರೆಯುತ್ತಾ ಬರ್ತಾನೆಂದು ಒಂದು ಪಾಡ್ದನ ಹೇಳುತ್ತದೆ. ಇನ್ನೊಂದು ಪಾಡ್ದನದ ಪ್ರಕಾರ ಮಾಪಳ ಹುಳಿಯನ್ನು ಕೊಯ್ಯಲು ಹೋಗುವಾಗ ಬ್ರಾಹ್ಮಣರು ಅವನನ್ನು ಕಡಿದು ಕೊಲ್ಲಲಾಗಿದೆ. ಆ ಮೇಲೆ ಅವರಿಗೆ ಆ ದೋಷ ಕಂಡು ಬರುವಾಗ ಕೊರಗಜ್ಜ ಅನ್ನುವ ಹೆಸರಿನಲ್ಲಿ ನಂಬಿದರು ಅನ್ನುವ ಪ್ರತೀತಿ ಇದೆ.

ಈಗಿನ ಕಾಲದಲ್ಲಿ ಕೊರಗಜ್ಜೆ ಅಂದರೆ ಎಲ್ಲರಿಗೂ ಪ್ರೀತಿ. ಎಲ್ಲರೂ ಜಾತಿ ಭೇದವಿಲ್ಲದೇ ನಂಬುವ ಹಾಗೂ ‘ಅಯ್ಯ’ ಅಂತ ಕರೆದರೆ ಓ ಅಂತ ಧ್ವನಿಗುಡುವ ಕಾರ್ನಿಕದ ಶಕ್ತಿಯಾಗಿ ಧರ್ಮ ದೈವ ಕೊರಗಜ್ಜ ಮೆರೆಯುತ್ತಿದ್ದಾನೆ.
ಸಂಗ್ರಹ


