ಬಂಟ್ವಾಳ:ತಾಲ್ಲೂಕಿನ ಸಂಗಬೆಟ್ಟು ಸಮೀಪದ ಪೂವಳ ಎಂಬಲ್ಲಿ ಸ್ಥಳೀಯ ಕೃಷಿಕರಿಬ್ಬರು ಶನಿವಾರ ಬೆಳಿಗ್ಗೆ ಇಲ್ಲಿನ ಫಲ್ಗುಣಿ ಹೊಳೆಯಲ್ಲಿ ನೀರು ಪಾಲಾದ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಅಗ್ನಿಶಾಮಕ ದಳ ತಂಡವು ಸ್ಥಳೀಯರ ನೆರವು ಪಡೆದು ಭಾನುವಾರ ದಿನವಿಡೀ ಮೃತದೇಹಕ್ಕಾಗಿ ಹುಡುಕಾಟ ಮುಂದುವರಿಸಿದೆ.ಇಲ್ಲಿನ ಆರಂಬೋಡಿ ಗ್ರಾಮದ ಪೂವಳ ನಿವಾಸಿ, ಪ್ರಗತಿಪರ ಕೃಷಿಕ ವಸಂತ ಶೆಟ್ಟಿ(50) ಎಂಬವರು ಶನಿವಾರ ಬೆಳಿಗ್ಗೆ ಸುಮಾರು ಏಳು ಗಂಟೆಗೆ ಬಟ್ಟೆ ತೊಳೆಯುವುದಕ್ಕಾಗಿ ಹೊಳೆಗೆ ಇಳಿದು ಬಳಿಕ ನೀರು ಪಾಲಾಗಿದ್ದರು. ಇದೇ ಸಂದರ್ಭದಲ್ಲಿ ಸುದ್ದಿ ತಿಳಿದು ಧಾವಿಸಿ ಬಂದಿದ್ದ ಇವರ ಸ್ನೇಹಿತ ಸ್ಥಳೀಯ ತಾಕೊಡೆ ನಿವಾಸಿ, ಕೃಷಿಕ ಚಾರ್ಲಿ ಡಿಸೋಜ(49) ಎಂಬವರು ಸ್ಥಳೀಯರೊಂದಿಗೆ ಕೆಲಹೊತ್ತು ಮೃತದೇಹಕ್ಕೆ ಹುಡುಕಾಟ ನಡೆಸಿದ್ದರು. ಈ ನಡುವೆ ಸ್ಥಳೀಯರ ವಿರೋಧವನ್ನೂ ಲೆಕ್ಕಿಸದೆ ಅವರು ಹೊಳೆಗೆ ಧುಮುಕಿ ನೆರೆಯಲ್ಲಿ ಕೊಚ್ಚಿ ಹೋಗಿದ್ದರು. ಇದರಿಂದಾಗಿ ಇಬ್ಬರ ಮೃತದೇಹಕ್ಕಾಗಿ ಶನಿವಾರ ಮತ್ತು ಭಾನುವಾರ ದಿನವಿಡೀ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಭಾನುವಾರ ಮಧ್ಯಾಹ್ನ ಬಳಿಕ ಹೊಳೆಯನ್ನು ನೆರೆ ನೀರು ರಭಸದಿಂದ ಹರಿಯುತ್ತಿರುವ ಪರಿಣಾಮ ನೀರಿಗೆ ಬೋಟ್ ಇಳಿಸಲು ಸಾಧ್ಯವಾಗಿಲ್ಲ. ಮಾತ್ರವಲ್ಲದೆ ಭಾರೀ ಸುಳಿ ಹೊಂದಿರುವ ಹೊಳೆಗೆ ಈಜುಗಾರರು ಕೂಡಾ ಇಳಿಯಲು ಹಿಂದೇಟು ಹಾಕುತ್ತಿರುವುದು ಕಂಡು ಬಂದಿದೆ. ಈಗಾಗಲೇ ಇಲ್ಲಿನ ಹನ್ನೆರಡು ಕವಲು ಬೊಬ್ಬ ಅಣೆಕಟ್ಟೆ, ಪುಚ್ಚಮೊಗರು ಸೇತುವೆ ಮತ್ತು ಕರ್ಪೆ ಬೊಬ್ಬ ಅಣೆಕಟ್ಟೆಯಲ್ಲಿ ಕೂಡಾ ಮೃತದೇಹಕ್ಕಾಗಿ ಭಾನುವಾರ ಹುಡುಕಾಟ ನಡೆಸಲಾಗಿದೆ.
ಇನ್ನೊಂದೆಡೆ ಕಣ್ಣೂರು ನೇತ್ರಾವತಿ ನದಿಯಲ್ಲಿ ಮಂಗಳೂರಿನ ಅಗ್ನಿಶಾಮಕ ದಳ ಸಿಬ್ಬಂದಿಗಳು ಹುಡುಕಾಟ ಆರಂಭಿಸಿದ್ದಾರೆ ಎಂದು ಅಗ್ನಿಶಾಮಕ ದಳ ಎಸೈ ಸುಂದರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಭಾನುವಾರ ದಿನವಿಡೀ ಮೃತರ ಸಂಬಂಧಿಗಳು ಮತ್ತು ಸ್ಥಳೀಯ ನಾಗರಿಕರು ಪುಚ್ಚಮೊಗರು ಸೇತುವೆ ಮೇಲೆ ಸಾಲು ಸಾಲಾಗಿ ನಿಂತು ನೀರಿನಲ್ಲಿ ಮೃತ ದೇಹ ಬರುವಿಕೆಗಾಗಿ ಕಾತರದಿಂದ ಕಾಯುತ್ತಿರುವ ದೃಶ್ಯ ಕಂಡು ಬಂದಿದೆ. ಭಾನುವಾರ ರಾತ್ರಿ ಬಳಿಕ ಹುಡುಕಾಟ ಸ್ಥಗಿತಗೊಳಿಸಿದ್ದು, ನೆರೆಯ ರಭಸಕ್ಕೆ ಮೃತದೇಹ ಸಮುದ್ರ ಪಾಲಾಗಿರುವ ಸಾಧ್ಯತೆಯಿದೆ ಎಂಬ ಅಭಿಪ್ರಾಯವೂ ಪೊಲೀಸರಿಂದ ವ್ಯಕ್ತವಾಗಿದೆ. ಸೋಮವಾರ ಮತ್ತೆ ಹುಡುಕಾಟ ಆರಂಭಿಸಲು ಪಾಣೆಮಂಗಳೂರು ಮತ್ತು ಉಳ್ಳಾಲ ಹಾಗೂ ಮಲ್ಪೆ ಈಜುಗಾರರನ್ನು ಕರೆಸುವ ಬಗ್ಗೆ ಸ್ಥಳೀಯ ವಕೀಲ ಸುರೇಶ ಶೆಟ್ಟಿ ಸಹಿತ ಮತ್ತಿತರರು ಚರ್ಚೆ ನಡೆಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಎ.ಕೆ.ರಕ್ಷಿತ್, ವೇಣೂರು ಠಾಣಾಧಿಕಾರಿ ಲೋಲಾಕ್ಷ, ಮೂಡುಬಿದ್ರೆ ತಹಶೀಲ್ದಾರ್ ಮಹಮ್ಮದ್ ಇಸಾಕ್ ಮತ್ತಿತರರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


