ಬಂಟ್ವಾಳ: ಪೋಷಕರು ಮಕ್ಕಳಿಗೆ ಕೊಡಬಹುದಾದ ಶಾಶ್ವತ ಆಸ್ತಿ ಶಿಕ್ಷಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಭಾನುವಾರ ನಡುಮೊಗರು ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆಗೆ ಮುಂಬೈ ಉದ್ಯಮಿ ಕುಸುಮಾಧರ ಡಿ.ಶೆಟ್ಟಿ ಕೊಡುಗೆಯಾಗಿ ನೀಡಿದ ಉಚಿತ ಶಾಲಾ ವಾಹನದ ಉದ್ಘಾಟನೆ ಹಾಗೂ ಜಯಶೆಟ್ಟಿ ಮುಂಬೈ ಇವರು ಕೊಡುಗೆಯಾಗಿ ನೀಡಿದ ಉಚಿತ ಲೇಖನ ಪುಸ್ತಕದ ವಿತರಣ ಸಮಾರಂಭದಲ್ಲಿ ಶಾಲಾ ವಾಹನಕ್ಕೆ ಹಸಿರು ನಿಶಾನೆ ತೋರಿ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೌಲ್ಯಧಾರಿತ ಶಿಕ್ಷಣವನ್ನು ಮಕ್ಕಳಿಗೆ ನೀಡಲು ಸರ್ಕಾರದೊಂದಿಗೆ ಸಂಘ ಸಂಸ್ಥೆಗಳು ಹಾಗೂ ಸೇವಾ ಸಂಸ್ಥೆಗಳು ಕೈ ಜೋಡಿಸಬೇಕು. ತಾನು ಕಲಿತ ಶಾಲೆಯ ಋಣ ತೀರಿಸುವ ನಿಟ್ಟಿನಲ್ಲಿ ಕುಸುಮಾಧರ ಶೆಟ್ಟಿಯವರು ಉಚಿತ ವಾಹನದ ಸೌಲಭ್ಯ ಒದಗಿಸಿಕೊಟ್ಟಿರುವುದು ಶ್ಲಾಘನೀಯ ಎಂದ ಅವರು ನಂಬಿಕೆಗಿಂತ ಮಿಗಿಲಾದ ಬಳುವಳಿ ಯಾವುದು ಇಲ್ಲ. ಜಾತಿ, ಧರ್ಮಗಳಿಂತ ಮನುಷ್ಯತ್ವವೇ ಮೇಲು ಎಂದರು
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಉಚಿತ ಶಾಲಾ ವಾಹನದ ದಾನಿ ಕುಸುಮಾಧರ ಶೆಟ್ಟಿ ಮಾತನಾಡಿ ನಾವು ಬೆಳೆದು ಬಂದ ಹಾದಿಯನ್ನು ಯಾವತ್ತು ಮರೆಯಬಾರದು. ನಾನು ಕಲಿತ ಶಾಲೆಗೆ ಕೊಡುಗೆ ನೀಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದರು. ಕನ್ನಡ ಮಾಧ್ಯಮವನ್ನು ಯಾರು ತಾತ್ಸಾರ ಮಾಡಬಾರದು, ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ಅನೇಕರು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಶಾಲೆಯ ಅಭಿವೃದ್ದಿಗೆ ಮುಂದೆಯೂ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ಜಿ.ಪಂ.ಸದಸ್ಯರಾದ ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪಿಯೂಸ್ ಎಲ್.ರೊಡ್ರಿಗಸ್, ತಾ.ಪಂ.ಸದಸ್ಯೆ ಬೇಬಿ ಕೃಷ್ಣಪ್ಪ, ಹಳೆವಿದ್ಯಾರ್ಥಿ ಸೇವಾ ಸಮಿತಿ ಅಧ್ಯಕ್ಷ ಕೆ.ಎನ್. ಶಿವರಾಮಶೆಟ್ಟಿ ನಡುಮೊಗರುಗುತ್ತು, ಕಕ್ಕೆಪದವು ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಮಂಗಳೂರು ಉದ್ಯಮಿ ಕೆ.ಎನ್.ಸಾಯಿಗಿರಿಧರ ಶೆಟ್ಟಿ, ದಂತ ವೈದ್ಯ ಡಾ.ರಾಜಾರಾಂ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ, ಗ್ರಾ.ಪಂ.ಸದಸ್ಯ ಶಿವಪ್ಪ ಪೂಜಾರಿ, ಎಸ್ಡಿಎಂಸಿ ಅಧ್ಯಕ್ಷ ನಾರಾಯಣ ಗೌಡ ಎಂ., ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶಾಲೆಯ ಶಿಕ್ಷಕ ಮಧುಸೂದನ್ ಸ್ವಾಗತಿಸಿ, ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಂಪತ್ಕುಮಾರ್ ಶೆಟ್ಟಿ ಪ್ರಸ್ತಾವಿಸಿದರು. ಮಣಿನಾಲ್ಕೂರು ಗ್ರಾ.ಪಂ.ಸದಸ್ಯೆ ಆದಂ ಕುಂಞ ವಂದಿಸಿದರು. ಶಿಕ್ಷಕ ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಬೇಡಿಕೆ ಪಟ್ಟಿ ಸಲ್ಲಿಕೆ: ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕ ಚಂದ್ರ ಕೆ. ಅವರು ಕುಡಿಯುವ ನೀರಿಗಾಗಿ ಕೊಳವೆ ಬಾವಿ ನಿರ್ಮಾಣ, ತರಗತಿ ಕೊಠಡಿ ನಿರ್ಮಾಣ, ಹಳೆ ಕೊಠಡಿಗಳ ದುರಸ್ತಿ, ರಂಗ ಮಂಟಪ, ಮೈದಾನ ಅಗಲೀಕರಣ, ತಡಗೋಡೆ ನಿರ್ಮಾಣ, ಹೆಚ್ಚುವರಿ ಶಿಕ್ಷಕರ ನೇಮಕ ಮೊದಲಾದ ಬೇಡಿಕೆಗಳ ಪಟ್ಟಿಯನ್ನು ಸಚಿವ ರಮಾನಾಥ ರೈವರಿಗೆ ಸಲ್ಲಿಸಿದರು.
ಮುಚ್ಚುವ ಭೀತಿಯಲ್ಲಿದ್ದ ಶಾಲೆಯಲ್ಲಿ 102 ಮಕ್ಕಳು:
ನಡುಮೊಗರಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 60 ವರ್ಷಗಳ ಇತಿಹಾಸ ಇದೆ. ಆದರೆ ಖಾಸಗಿ ಶಾಲೆ ಹಾಗೂ ಆಂಗ್ಲ ಭಾಷೆ ವ್ಯಾಮೋಹದಿಂದಾಗಿ ಈ ಶಾಲೆಯಲ್ಲೂ ಮಕ್ಕಳ ಕೊರತೆ ಕಾಣಿಸಿಕೊಂಡಿತ್ತು. 2011-12ರಲ್ಲಿ ಕೇವಲ 23 ಮಕ್ಕಳು ಮಾತ್ರ ಇಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇನ್ನು ಕೆಲವೇ ವರ್ಷದಲ್ಲಿ ಶಾಲೆ ಮುಚ್ಚುತ್ತದೆ ಎನ್ನುವ ಭೀತಿಯಲ್ಲಿರುವಾಗಲೇ ಶಿಕ್ಷಕರು, ಎಸ್ಡಿಎಂಸಿ ಹಾಗೂ ಹಳೇ ವಿದ್ಯಾರ್ಥಿ ಸೇವಾ ಸಮಿತಿಯ ವಿಶೇಷ ಪ್ರಯತ್ನದಿಂದಾಗಿ ಶಾಲೆಯಲ್ಲಿ ಮತ್ತೆ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿ ಈಗ 102 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
