ಬಂಟ್ವಾಳ: ದೇಶದ ಭವಿಷ್ಯ ತರಗತಿಯ ಕೋಣೆಗಳಲ್ಲಿದೆ, ಸರಕಾರವು ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವಾರು ರೀತಿಯ ಸಹಕಾರ ನೀಡುತ್ತಿದೆ .ಪ್ರತಿ ಮಗುವಿಗೂ ಕಲಿಕೆಯ ಬಗ್ಗೆ ಯಾವುದೇ ಕಾರಣಕ್ಕು ಯಾವ ರೀತಿಯಲ್ಲೂ ಲೋಪವಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ ಜಿ ಹೇಳಿದ್ದಾರೆ.

ಸೋಮವಾರ ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಮಜಿದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ತಾಲೂಕು ಮಟ್ಟದ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ವೈಜ್ಞಾನಿಕ ಯುಗದಲ್ಲಿ ಶೈಕ್ಷಣಿಕವಾಗಿ ಬೆಳೆದ ಮಗು ಯಾವುದೇ ಕ್ಷೇತ್ರದಲ್ಲೂ ಹಿಂದುಳಿಯಲಾರ ಬದುಕಿನ ಏಳುಬೀಳುಗಳಿಗೆ ಶಿಕ್ಷಣವು ಮನೋಬಲ ತುಂಬುತ್ತದೆ , ಮಗುವಿನಲ್ಲಿ ಆತ್ಮವಿಶ್ವಾಸವನ್ನು ಬೆಳೆಸಬೇಕು ಹಾಗೂ ಉತ್ತಮ ಹವ್ಯಾಸವನ್ನು ರೂಢಿಸಿದಾಗ ಅದು ಮಕ್ಕಳನ್ನು ಸದೃಢರನ್ನಾಗಿ ಮಾಡುತ್ತದೆ, ಮಕ್ಕಳ ಮನಸ್ಸನ್ನು ಮುಟ್ಟುವ ಕೆಲಸ ನಮ್ಮದಾಗಬೇಕು ಎಂದರು.

ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಪ್ರಭಾರ ಸಮನ್ವಯಾಧಿಕಾರಿ ವಿದ್ಯಾ ಅವರು ಮಾತನಾಡಿ, ಶಿಕ್ಷಣವು ಮಗುವಿನ ಸಾಮಾಜಿಕ ಜೀವನವನ್ನು ಬಲಗೊಳಿಸುತ್ತದೆ, ಉತ್ತಮ ಜೀವನ ಶೈಲಿಯ ಜೊತೆಗೆ ನಿರಂತರ ಅಭ್ಯಾಸವು ಗುರಿಮಟ್ಟುವಲ್ಲಿ ಸಹಾಯ ಮಾಡುತ್ತದೆ, ಪೋಷಕರು ಮತ್ತು ಶಿಕ್ಷಕರು ಮಗುವಿನ ಕಲಿಕೆಗೆ ಸಹಭಾಗಿಗಳಾದಾಗ ಮಗು ಆಸಕ್ತಿದಾಯಕವಾಗಿ ಕಲಿಯಲು ಸಹಕಾರಿಯಾಗುತ್ತದೆ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ,
ಸರಕಾರಿ ಶಾಲೆಗಳು ಇಂದು ಬಹಳಷ್ಟು ಬದಲಾವಣೆಯನ್ನು ಕಂಡಿದೆ. ಮಗುವಿನ ಬೆಳವಣಿಗೆಯಲ್ಲಿ ಪ್ರಾಥಮಿಕ ಹಂತದಲ್ಲಿ ಸರಿಯಾದ ಶಿಕ್ಷಣ ದೊರಕಿದಾಗ ಉತ್ತಮ ಫಲದೊರಕಲು ಸಾಧ್ಯ ಎಂದರು.
ಶಾಲಾ ಹಿರಿಯ ವಿದ್ಯಾರ್ಥಿ, ವಿಟ್ಲ ಗ್ರಾಮೀಣ ಬ್ಯಾಂಕಿನ ನಿರ್ದೇಶಕ ವಿಶ್ವನಾಥ.ಎಮ್,
ಮಜಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಈಶ್ವರ ಭಟ್ ರಾಕೋಡ್ ಮಾತನಾಡಿದರು.
ಬಂಟ್ವಾಳ ತಾಲೂಕಿನ ಕಲ್ಲಡ್ಕ ಕ್ಲಸ್ಟರ್ ಇದರ ಶಿಕ್ಷಣ ಸಂಯೋಜಕಿ ಪ್ರತಿಮಾ ಅವರು ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
2025- 26ನೇ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳನ್ನು ಘೋಷವಾದ್ಯದ ಮೂಲಕ ಮೆರವಣಿಗೆಯಲ್ಲಿ ಕರೆತರಲಾಯಿತು, ತದನಂತರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರ ಜೊತೆಯಲ್ಲಿ ಶಾಲಾ ಶಿಕ್ಷಕಿಯರು , ಎಸ್.ಡಿ. ಎಂ.ಸಿ ಸದಸ್ಯರು ಪನ್ನೀರು ಹಾಗೂ ಹೂದಳಗಳನ್ನು ಸಿಂಪಡಿಸಿ ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು.
ಗುಬ್ಬಚ್ಚಿ ಗೂಡು ಕಾರ್ಯಕ್ರಮದ ರೂವಾರಿಗಳಾದ ರಮ್ಯಾ ಹಾಗೂ ನಿತ್ಯಾನಂದ ಶೆಟ್ಟಿ ದಂಪತಿಗಳು ವಿದ್ಯಾರ್ಥಿಗಳಿಗೆ ಕಾರ್ಟೂನ್ ನೆಟ್ವರ್ಕ್ ಗೊಂಬೆ ಮುಖವಾಡದೊಂದಿಗೆ ಮಕ್ಕಳನ್ನು ಆಕರ್ಷಿಸಿದರು.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅಭಿಯಾನ ನಿರ್ಮಾಣ ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಸಹಕರಿಸುವಂತೆ “ಅಕ್ಷಯ ಬುಟ್ಟಿ’ ಎನ್ನುವ ವಿನೂತನ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಡೇಶ್ವಾಲಯ ಯುವ ಸೇವಾಪಥ ಸಂಸ್ಥೆ ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು. ಇಲಾಖೆಯಿಂದ ನೀಡುತ್ತಿರುವ ಎಲ್ಲಾ ಉಚಿತ ಯೋಜನೆಗಳಿಗೆ ಚಾಲನೆ ನೀಡಿ ಸದರಿ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಲಾಯಿತು.
ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ನಾರುಕೋಡಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ವನಿತಾ, ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ವಿಶೇಷ ಸಂಪನ್ಮೂಲ ವ್ಯಕ್ತಿ ರವೀಂದ್ರ, ಮಾತೃಶ್ರೀ ಗೆಳೆಯರ ಬಳಗದ ಅಧ್ಯಕ್ಷರಾದ ರಮೇಶ್ ಗೌಡ ಮೈರ, ಕಲ್ಲಡ್ಕ ಮತ್ತು ಕಂಬಳಬೆಟ್ಟು ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ, ಮೆಲ್ಕಾರ್ ಚಂದ್ರಿಕಾ ವೆಜಿಟೇಬಲ್ಸ್ ನ ಮಾಲಕ ಮೊಹಮದ್ ಶರೀಫ್, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಮಕ್ಕಳ ಪೋಷಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿದ್ದರಶಾಲಾ ಮಕ್ಕಳು ಪ್ರಾರ್ಥಿಸಿ, ಮಜಿಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ವಂದಿಸಿದರು. ಶಿಕ್ಷಕಿ ಸಂಗೀತ ಶಮ೯ ಪಿ ಜಿ ಕಾರ್ಯಕ್ರಮ ನಿರೂಪಿಸಿದರು.
