ಬಂಟ್ವಾಳ:ಮಕ್ಕಳಿಗೆ ಬಾಲ್ಯದಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಿದಾಗ ಅವರಲ್ಲಿ ಸಾಧನಾ ಮನೋಭಾವ ಬೆಳೆಸಲು ಸಾಧ್ಯವಾಗುತ್ತದೆ. ಆ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕೂಡಾ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಮತ್ತಿತರ ಸಾಧನೆ ಮೂಲಕ ಗಮನ ಸೆಳೆಯುತ್ತಾರೆ ಎಂದು ರಾಜ್ಯ ಬಾಲ ಭವನ ಸೊಸೈಟಿ ಮಾಜಿ ಅಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್ ಹೇಳಿದ್ದಾರೆ. ಇಲ್ಲಿನ ಕುದ್ಕೋಳಿ ಓಂ ಫ್ರೆಂಡ್ಸ್ ಸಂಘಟನೆ ವತಿಯಿಂದ ಶನಿವಾರ ಸಂಜೆ ನಡೆದ 10ನೇ ವರ್ಷದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರಮೇಶ ಭಟ್ ಮಾದೇರಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿ.ಸಿ.ರೋಡ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕೆ.ಸರಸ್ವತಿ ಭಟ್ ಮಾತನಾಡಿ, ಇತ್ತೀಚೆಗಿನ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರವೇ ಸ್ವತಃ ಎಲ್ಲಾ ರೀತಿಯ ಶೈಕ್ಷಣಿಕ ನೆರವು ನೀಡುತ್ತಿದೆ ಎಂದು ತಿಳಿಸಿದರು. ಸ್ಥಳೀಯ ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆಯೂ ಮಾಹಿತಿ ಪಡೆಯಬೇಕು ಎಂದರು.
ಬಂಟ್ವಾಳ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ರಾಯಿ, ಉದ್ಯಮಿ ಯೋಗೀಶ ಪಿ.ಕೋಟ್ಯಾನ್, ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಸದಸ್ಯೆ ಸುಜಾತ ಮತ್ತಿತರರು ಶುಭ ಹಾರೈಸಿದರು.
ಇದೇ ವೇಳೆ ಸ್ಥಳೀಯ ಸುಮಾರು 100ಕ್ಕೂ ಮಿಕ್ಕಿ ಮಂದಿ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು. ಸಂಘದ ಅಧ್ಯಕ್ಷ ಪೂವಪ್ಪ ಜಿ., ಮಹಿಳಾ ಘಟಕ ಅಧ್ಯಕ್ಷೆ ಮೋಹಿನಿ ಮತ್ತಿತರರು ಇದ್ದರು. ಸಂಘದ ಸದಸ್ಯ ರುದೇಶ್ ಸ್ವಾಗತಿಸಿ, ವಂದಿಸಿದರು.
